ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ (ಮಾಹೆ) ವತಿಯಿಂದ ಆಯೋಜಿಸಿದ ಮಣಿಪಾಲ ಮ್ಯಾರಥಾನ್ 8ನೇ ಆವೃತ್ತಿಗೆ ಭಾನುವಾರ ಮಣಿಪಾಲದ ಕೆ.ಎಂ.ಸಿ ಗ್ರೀನ್ಸ್ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮ್ಯಾರಥಾನ್ ಗೆ ಚಾಲನೆ ನೀಡಿದರು. ಈ ಬಾರಿಯ ಮ್ಯಾರಥಾನ್‌ನಲ್ಲಿ ದೇಶ ವಿದೇಶಗಳಿಂದ ದಾಖಲೆಯ 20,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದರು. ವನಿತಾ ಟಿ20 ಅಂಧರ ವಿಶ್ವಕಪ್ ನಲ್ಲಿ ವಿಜೇತ ತಂಡದ ಸದಸ್ಯರು ಕೂಡ ಭಾಗವಹಿಸಿದ್ದರು.

ಹಸಿರು ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ಓಟ’ ಎಂಬ ಸಂದೇಶದಡಿ ನಡೆದ ಈ ಬಾರಿಯ ಮ್ಯಾರಥಾನ್ 42 ಕಿ.ಮೀ. ಫುಲ್ ಮ್ಯಾರಥಾನ್, 21 ಕಿ.ಮೀ. ಹಾಫ್ ಮ್ಯಾರಥಾನ್, 10 ಕಿ.ಮೀ., 5 ಕಿ.ಮೀ. ಹಾಗೂ 3 ಕಿ.ಮೀ. ಫನ್ ರನ್ ಸೇರಿ ಐದು ವಿಭಾಗಗಳಲ್ಲಿ ಓಟವನ್ನು ಆಯೋಜಿಸಲಾಯಿತು. ದುಬೈ, ಇಂಗ್ಲೆಂಡ್, ಇಥಿಯೋಪಿಯಾ, ಜರ್ಮನಿ, ಜಪಾನ್, ಕೀನ್ಯಾ, ಮಲೇಶಿಯಾ, ನೇಪಾಳ, ಶ್ರೀಲಂಕಾ, ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾಳುಗಳ ಜತೆಗೆ ದೇಶದ ವಿವಿಧ ಭಾಗಗಳಿಂದ ಓಟಗಾರರು ಪಾಲ್ಗೊಂಡಿದ್ದರು.

ಫುಲ್ ಮ್ಯಾರಥಾನ್ ಮಾಹೆ ಗ್ರೀನ್ಸ್‌ನಿಂದ ಪ್ರಾರಂಭಗೊಂಡು ಪೆರಂಪಳ್ಳಿ, ಅಂಬಾಗಿಲು, ಸಂತೆಕಟ್ಟೆ, ಕೆಮ್ಮಣ್ಣು, ಹೂಡೆ, ಮಲ್ಪೆ ಬೀಚ್, ಕಲ್ಮಾಡಿ, ಕಿದಿಯೂರು, ಉದ್ಯಾವರ, ಕಿನ್ನಿಮೂಲ್ಕಿ , ಉಡುಪಿ, ಕಲ್ಸಂಕ ಮಾರ್ಗವಾಗಿ ಮಾಹೆಯಲ್ಲಿ ಮುಕ್ತಾಯಗೊಂಡಿತು. 10ಕಿ.ಮೀ. ಓಟ ವಿಶೇಷವಾಗಿ ಕೊಳಲಗಿರಿ ಹಾವಂಜೆ ಬಳಿ ನಿರ್ಮಿಸಿರುವ ಮಣಿಪಾಲ ಹಾಸ್ಪಿಸ್ ಆ್ಯಂಡ್ ರಿಸ್ಪೈಟ್ ಕೇಂದ್ರದ ಮೂಲಕ ಸಾಗಿಬಂತು.