ಗೃಹಲಕ್ಷ್ಮಿ ಯೋಜನೆಯ ಹಣ ದುರುಪಯೋಗ ತಡೆಯಲು ಹೊಸ ನಿಯಮ ಜಾರಿಗೆ ಬರುತ್ತಿದೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಎಂಎಲ್ಸಿ ಆಗಿರುವ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದರು.
ರಾಜ್ಯದಲ್ಲಿ ಸುಮಾರು 1.24 ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದು, ಸರ್ಕಾರ ಈವರೆಗೆ ಸುಮಾರು 57,300 ಕೋಟಿ ರೂ.ಗಳಿಗೂ ಅಧಿಕ ಆರ್ಥಿಕ ನೆರವನ್ನು ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯೋಜನೆಯ ಫಲಾನುಭವಿಗಳಲ್ಲಿ ಕೆಲವರು ಮರಣ ಹೊಂದಿದ್ದರೂ, ಅವರ ಮಾಹಿತಿ ಸರ್ಕಾರಕ್ಕೆ ತಲುಪುತ್ತಿಲ್ಲ. ಪರಿಣಾಮವಾಗಿ, ಮೃತಪಟ್ಟ ಮಹಿಳೆಯರ ಖಾತೆಗೂ ಹಣ ಜಮಾವಣೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ದಿನೇಶ್ ಗೂಳಿಗೌಡ ಅವರು, ‘ಕುಟುಂಬದ ಜೀವನ ನಿರ್ವಹಣೆಗೆ ಆಸರೆಯಾಗಿರುವ ಈ ಯೋಜನೆಯ ಹಣವು ಮರಣ ಹೊಂದಿರುವ ಫಲಾನುಭವಿಗಳಿಗೆ ಪಾವತಿಯಾಗುವುದನ್ನು ತಡೆಗಟ್ಟುವುದು ಅವಶ್ಯಕ. ಇದರಿಂದ ಉಳಿತಾಯವಾಗುವ ಮೊತ್ತವನ್ನು ಇತರೆ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಥವಾ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಅನುಕೂಲವಾಗುತ್ತದೆ’ ಎಂದು ವಿವರಿಸಿದ್ದಾರೆ.
ದಿನೇಶ್ ಗೂಳಿಗೌಡ ಅವರ ಪತ್ರವನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರದ ಮೇಲೆಯೇ “ಪರಿಶೀಲಿಸಿ, ಕೂಡಲೇ ಕ್ರಮ ತೆಗೆದುಕೊಳ್ಳುವುದು” ಎಂದು ಷರಾ ಬರೆದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ರವಾನಿಸಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಈ ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಯಿದೆ.

