ಮಂಗಳೂರು : ನೀಟ್ ಪರೀಕ್ಷೆಯಲ್ಲಿ ನಿರಂತರವಾಗಿ ಅಕ್ರಮಗಳು ಬೆಳಕಿಗೆ ಬರುತ್ತಿರುವುದು ಯುವಜನರ ಭವಿಷ್ಯಕ್ಕೆ ಮಾರಕವಾಗಿದೆ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ರಮಾನಾಥ್ ರೈ ಆಗ್ರಹಿಸಿದರು.
ದೇಶದ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದ್ದರೂ ಕೇಂದ್ರ ಶಿಕ್ಷಣ ಸಚಿವರು ಮಾಧ್ಯಮಗಳನ್ನು ಎದುರಿಸಲು ಹಿಂಜರಿಯುತ್ತಿರುವುದು ಅವರ ಅಸಮರ್ಥತೆಯ ಸಂಕೇತವಾಗಿದೆ. ಕೆಳಮಟ್ಟದ ಅಧಿಕಾರಿಗಳನ್ನು ಮಾತ್ರ ಬಲಿಪಶು ಮಾಡುವ ಬದಲು, ಅಕ್ರಮದ ಹಿಂದೆ ಇರುವ ದೊಡ್ಡ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೀಟ್ ಸೇರಿದಂತೆ ಶಿಕ್ಷಣ ಕ್ಷೇತ್ರದ ಎಲ್ಲಾ ಹಗರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಬಾಧಿತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಮಮತಾ ಗಟ್ಟಿ, ಬೇಬಿ ಕುಂದರ್, ಜಯಶೀಲ ಅಡ್ಯಂತಾಯ, ವಿಕಾಸ್ ಶೆಟ್ಟಿ, ಶುಭೋದ್ ಆಳ್ವ, ಶಬೀರ್ ಸಿದ್ದಕಟ್ಟೆ ಹಾಗೂ ಅಪ್ಪಿ ಉಪಸ್ಥಿತರಿದ್ದರು.

