ಉಡುಪಿ: ಆಧಾರಸ್ಥಂಬ ಕಳೆದುಕೊಂಡು ಮಗನೊಂದು ಜೀವನ ನಡೆಸುತ್ತಿದ್ದ ಪಳ್ಳಿ ಕನ್ನಡಿಬೈಲು ಸುಮಿತ್ರ ದಿನೇಶ ಆಚಾರ್ಯ ಎರ್ಮಾಲು ಅವರಿಗೆ “ಸಮಾನ ಮನಸ್ಕರ ತಂಡ ಉಡುಪಿ” ನಿರ್ಮಿಸಿಕೊಟ್ಟ ಮನೆಯನ್ನು ಹಸ್ತಾಂತರಿಸಲಾಯಿತು.
ಸಮಾನ ಮನಸ್ಕರ ತಂಡವು ತನ್ನ ಸಾಮಾಜಿಕ ಸೇವಾ ಯೋಜನೆಯಡಿ ಹಸ್ತಾಂತರಿಸಿದ 37ನೇ ಮನೆ ಇದಾಗಿದೆ. ಶಶಿಧರ ಪುರೋಹಿತರ ನೇತೃತ್ವದಲ್ಲಿ ಪುತ್ತೂರು ಶಿಲ್ಪಿ ಮಾಧವ ಆಚಾರ್ಯರ ಮಾರ್ಗದರ್ಶನದಲ್ಲಿ ಜಯಂತಿ ಆಚಾರ್ಯ ಪಳ್ಳಿ, ವೀಣಾ ಆಚಾರ್ಯ ಪಳ್ಳಿ, ಜಗದೀಶ್ ಆಚಾರ್ಯ ಪಳ್ಳಿ, ವೈ.ಎ. ಬಾಳ್ಳಟ್ಟ ಮೊದಲಾದವರ ನಿರ್ವಹಣೆಯಲ್ಲಿ ಮನೆಯನ್ನು ನಿರ್ಮಿಸಿ, ಹಸ್ತಾಂತರಿಸಲಾಯಿತು.

ಸುಮಿತ್ರ ಅವರ ಪತಿ ದಿನೇಶ್ ಆಚಾರ್ಯ ಕ್ಯಾನ್ಸರ್ ನಿಂದ ಮೃತಪಟ್ಟಿದ್ದು, ಓರ್ವ ಮಗನೊಂದಿಗೆ ಸುಮಿತ್ರ ವಾಸಿಸುತ್ತಿದ್ದರು. ವಾಸಕ್ಕೆ ಮನೆ ಇರಲಿಲ್ಲ ಎಂಬುವುದನ್ನು ಮನಗಂಡ ಸಮಾನ ಮನಸ್ಕರ ತಂಡ ಮಾನವೀಯತೆ ನೆಲೆಯಲ್ಲಿ ದಾನಿಗಳ ಸಹಕಾರದಿಂದ ಸೂರೊಂದನ್ನು ಕಟ್ಟಿಕೊಟ್ಟಿದೆ.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಮನುಷ್ಯತ್ವವೇ ದೇವರು” ಎಂಬ ಧೈಯ ವಾಕ್ಯದೊಂದಿಗೆ ಸಮಾನ ಮನಸ್ಕರೆಂಬ ಸಮಾಜದ ಹೃದಯ ಶ್ರೀಮಂತರು ಸೇರಿ ದೇವರು ಕೊಟ್ಟ ಅವಕಾಶಗಳನ್ನು ಸಮಾಜದ ಒಳಿತಿಗಾಗಿ ಸಂಘಟನೆಯಿಂದ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಮಾನವೀಯ ಕಾರ್ಯ ಹೀಗೇ ಮುಂದುವರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಶಿಧರ್ ಪುರೋಹಿತ್ ಕಟಪಾಡಿ, ಯೋಗೀಶ್ವರ್ ಆಚಾರ್ಯ ಅತ್ರಾಡಿ, ನಿವೃತ್ತ ಅಧ್ಯಾಪಕರಾದ ಶೀನಿವಾಸ ರಾವ್, ಬಾಲಾಜಿ ಜುವೆಲ್ಲರ್ಸ್ ಮಾಲಕರಾದ ಯಶವಂತ್ ಆಚಾರ್ಯ, ವಿಶ್ವನಾಥ ಭಂಡಾರಿ ಪಳ್ಳಿ, ವಿಲ್ಸನ್ ಲೋಬೊ ಪಳ್ಳಿ, ವಿಜಯ ಎಂ. ಶೆಟ್ಟಿ, ಪ್ರಶಾಂತ್ ಶೆಟ್ಟಿ, ಜಯಂತಿ, ಗಣೇಶ್ ಆಚಾರ್ಯ, ವೀಣಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

