ಪುತ್ತೂರು: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಮಾರ್ಚ್ 5ರಂದು ಪುತ್ತೂರಿಗೆ ಭೇಟಿ ನೀಡಿದ್ದು, ಈ ವೇಳೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಸಂತ್ರಸ್ತೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಮಾರ್ಚ್ 5 ರಿಂದ ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಅವರು ಪುತ್ತೂರಿನ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ತಾರಿಗುಡ್ಡೆಯ ಸಂತ್ರಸ್ತೆ ಮನೆಗೆ ಭೇಟಿ ನೀಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಧ್ಯಕ್ಷರು, ಸಂತ್ರಸ್ತೆಯ ಪರವಾಗಿ ತಾಯಿಯಂತೆ ಅವಳ ಜೊತೆ ನಿಲ್ಲುತ್ತೇನೆ. ಮಹಿಳಾ ಆಯೋಗ ನೊಂದ ಮಹಿಳೆಯರಿಗೆ ತಾಯಿ ಸ್ಥಾನದಲ್ಲಿದ್ದು, ಸಹಾಯ ಮಾಡುತ್ತದೆ. ಸಂತ್ರಸ್ತೆಗೆ ಎಲ್ಲಾ ರೀತಿಯ ಸಹಾಯವನ್ನು ಆಯೋಗದ ಮುಖಾಂತರ ಮಾಡಲಾಗುವುದು.
ಯುವತಿಯ ಮುಂದಿನ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿ ಆಕೆಯನ್ನು ಆರ್ಥಿಕ, ಶೈಕ್ಷಣಿಕವಾಗಿ ಸದೃಢಗೊಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಪ್ರಕರಣ ನ್ಯಾಯಾಲಯದ ಮುಂದೆ ಇರುವಾಗ ಇದಕ್ಕಿಂತ ಹೆಚ್ಚು ಮಾತನಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

