ಬೆಳ್ತಂಗಡಿ: ನಿನ್ನೆ ತಡರಾತ್ರಿ ಕಳ್ಳರು ಸರಣಿ ಕಳ್ಳತನ ನಡೆಸಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ಅಂಗಡಿ-ಕಚೇರಿಗಳ ಬೀಗ ಮುರಿದು ನಗದು ದೋಚಿ ಪರಾರಿಯಾಗಿರುವ ಘಟನೆ ಬೆಳ್ತಂಗಡಿ ನಗರ ಪ್ರದೇಶದಲ್ಲಿ ನಡೆದಿದೆ.
ನಗರದ ಕೋರ್ಟ್ ರಸ್ತೆಯಲ್ಲಿರುವ ಧರ್ಮಶ್ರೀ ಬಿಲ್ಡಿಂಗ್ನ ‘ಸಮೃದ್ಧಿ ಎಂಟರ್ಪ್ರೈಸಸ್’ ಸಂಸ್ಥೆಗೆ ನುಗ್ಗಿದ ಕಳ್ಳರು, ಅಲ್ಲಿಟ್ಟಿದ್ದ ಸುಮಾರು 1.50 ಲಕ್ಷ ರೂಪಾಯಿ ನಗದನ್ನು ದೋಚಿ. ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿ, ಅದರ ಮೆಮೊರಿ ಕಾರ್ಡ್ ನ್ನು ಪಡೆದು ಪರಾರಿಯಾಗಿದ್ದಾರೆ.
ಅದೇ ಕಟ್ಟಡದಲ್ಲಿರುವ ಟಿ.ಎಚ್. ರಿಯಲ್ ಎಸ್ಟೇಟ್ ಕಚೇರಿ, ಕಟ್ಟಡದ ಮಾಲೀಕರ ಕಚೇರಿ ಹಾಗೂ ವಕೀಲರುಗಳಾದ ರಾಧಾಕೃಷ್ಣ, ಉಷಾ ಎನ್.ಜಿ. ಮತ್ತು ಯತೀಶ್ ಶೆಟ್ಟಿ ಪಿ. ಅವರ ಕಚೇರಿಗಳಿಗೂ ಕಳ್ಳರು ಕನ್ನ ಹಾಕಿದ್ದಾರೆ.
ಮೂರು ಮಾರ್ಗದ ಬಳಿ ಇರುವ ‘ಮಾತೃಶ್ರೀ ಹೋಟೆಲ್’ಗೆ ನುಗ್ಗಿದ ಖದೀಮರು, ಡಬ್ಬಿಯಲ್ಲಿದ್ದ 5,000 ರೂ. ಹಾಗೂ ಡ್ರಾವರ್ನಲ್ಲಿದ್ದ 2,000 ರೂ. ನಗದನ್ನು ಕಳ್ಳತನ ಮಾಡಿದ್ದಾರೆ. ಇದರೊಂದಿಗೆ ಪಕ್ಕದಲ್ಲೇ ಇರುವ ‘ಶಬರಿ ಎಂಟರ್ಪ್ರೈಸಸ್’ನಿಂದ ಸುಮಾರು 2,000 ರೂ., ವಕೀಲ ಜಯರಾಮ ಮಣಿಯಾಣಿ ಅವರ ಕಚೇರಿ, ಮೆ| ಹಿಮಾಲಯ ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್ ಹಾಗೂ ವಕೀಲ ಜಿತೇಶ್ ಕೆ. ಅವರ ಕಚೇರಿಗಳ ಬೀಗ ಮುರಿದು ನುಗ್ಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

