ಮೈಸೂರು: ಗಾಯನ ಹಾಗೂ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿರುವ ನವೀನ್ ಸಜ್ಜು ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ, ಇತ್ತೀಚೆಗಷ್ಟೇ ತೆರೆಕಂಡು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ‘ಲೋ ನವೀನ’ ಚಲನಚಿತ್ರವು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಚಿತ್ರದ ಈ ಯಶಸ್ಸಿನ ಖುಷಿಯಲ್ಲಿ ಚಿತ್ರತಂಡವು ಮೈಸೂರಿನ ಪ್ರಖ್ಯಾತ ಅವಧೂತ ಶ್ರೀ ಅರ್ಜುನ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿ, ಅವರ ದಿವ್ಯ ಆಶೀರ್ವಾದವನ್ನು ಪಡೆದುಕೊಂಡಿದೆ.
ಚಿತ್ರದ ನಾಯಕ ನಟ ನವೀನ್ ಸಜ್ಜು ಹಾಗೂ ಚಿತ್ರತಂಡದ ಪ್ರಮುಖರು ಗುರೂಜಿ ಅವರನ್ನು ಭೇಟಿ ಮಾಡಿ, ಸಿನಿಮಾಗೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಚಿತ್ರತಂಡವನ್ನು ಹರಸಿದ ಶ್ರೀ ಅರ್ಜುನ್ ಗುರೂಜಿ ಅವರು, ನವೀನ್ ಸಜ್ಜು ಅವರ ನಟನೆ ಮತ್ತು ಚಿತ್ರದ ಕಥಾವಸ್ತುವನ್ನು ಶ್ಲಾಘಿಸಿ, ಮುಂಬರುವ ದಿನಗಳಲ್ಲಿ ಸಿನಿಮಾ ಇನ್ನಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ನಟ ನವೀನ್ ಸಜ್ಜು ಲೋ ನವೀನ’ ಸಿನಿಮಾವನ್ನು ಪ್ರೇಕ್ಷಕರು ಕೈಹಿಡಿದಿದ್ದಾರೆ. ಚಿತ್ರಮಂದಿರಗಳಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಚಿತ್ರತಂಡಕ್ಕೆ ಆನೆ ಬಲ ಬಂದಂತಾಗಿದೆ. ಈ ಯಶಸ್ಸಿನ ಬೆನ್ನಲ್ಲೇ ಮೈಸೂರಿನ ಅವಧೂತ ಅರ್ಜುನ್ ಗುರೂಜಿ ಅವರ ದರ್ಶನ ಪಡೆದು, ಅವರ ಆಶೀರ್ವಾದ ಪಡೆದಿರುವುದು ನಮ್ಮ ಸೌಭಾಗ್ಯ. ಅವರ ಸಕಾರಾತ್ಮಕ ಮಾತುಗಳು ಮತ್ತು ಹರಕೆ ನಮ್ಮ ಇಡೀ ತಂಡಕ್ಕೆ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಲು ಪ್ರೇರಣೆ ನೀಡಿದೆ,” ಎಂದು ಭಾವುಕರಾಗಿ ನುಡಿದರು.
ಪ್ರೇಕ್ಷಕರ ಮನಗೆದ್ದ ‘ಲೋ ನವೀನ’
ವಿನೂತನ ಕಥಾಹಂದರ ಹಾಗೂ ಮನರಂಜನೆಯ ಪ್ಯಾಕೇಜ್ ಹೊಂದಿರುವ ‘ಲೋ ನವೀನ’ ಸಿನಿಮಾ ಬಿಡುಗಡೆಯಾದ ದಿನದಿಂದಲೇ ಧನಾತ್ಮಕ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಿದೆ. ನವೀನ್ ಸಜ್ಜು ಅವರ ವಿಭಿನ್ನ ನಟನೆ, ಚಿತ್ರದ ಹಾಡುಗಳು ಮತ್ತು ಪ್ರೇಕ್ಷಕರನ್ನು ಕಟ್ಟಿಹಾಕುವ ಚಿತ್ರಕಥೆ ಸಿನಿಮಾದ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರತಂಡ, ಗುರೂಜಿ ಅವರ ಆಶೀರ್ವಾದದ ಬಲದೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮತ್ತಷ್ಟು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ.

