ಮಂಗಳೂರು : ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳು ನಿಷೇಧಿತ ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸೆ.7ರ ತಡರಾತ್ರಿ ಪೊಲೀಸರು ದಾಳಿ ನಡೆಸಿದ್ದು ಒಂಬತ್ತು ಮಂದಿ ನಟೋರಿಯಸ್ ಆರೋಪಿಗಳು ಹತ್ತು ಮೊಬೈಲ್ ಫೋನ್ ಬಳಸಿಕೊಂಡಿದ್ದನ್ನು ಪತ್ತೆ ಮಾಡಿದ್ದಾರೆ.

ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದಾಗ, ಎ-ಬ್ಲಾಕ್‌ನಲ್ಲಿದ್ದ ಕೈದಿಗಳ ಪೈಕಿ ಅಕ್ರಮವಾಗಿ 10 ಮೊಬೈಲ್ ಸ್ಮಾರ್ಟ್‌ಫೋನ್ ಗಳನ್ನು ಬಚ್ಚಿಟ್ಟುಕೊಂಡಿದ್ದನ್ನು ವಶಪಡಿಸಲಾಗಿದೆ. ತೊಕ್ಕೊಟ್ಟಿನಲ್ಲಿ ಇತ್ತೀಚೆಗೆ ನಡೆದ ಆರಿಫ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಟೋರಿಯಸ್ ಗ್ಯಾಂಗ್ ಸ್ಟರ್ ಗಳಾದ ರಿಫಾತ್ ಅಲಿ, ಇಬ್ರಾಹಿಂ ಖಲೀಲ್, ಅಶ್ವಾಕ್ ಅಲಿಯಾಸ್ ಜುಟ್ಟು ಅಸ್ಪಕ್ ಮತ್ತು ಅರ್ಷದ್ ಎಂಬವರು ಮೊಬೈಲ್ ಸ್ಮಾರ್ಟ್ ಫೋನ್ ಬಳಸುತ್ತಿದ್ದುದು ಪತ್ತೆಯಾಗಿದೆ.

ಡ್ರಗ್ ಪೆಡ್ಲರ್ ಗಳಾಗಿದ್ದು ಎನ್ ಡಿಪಿಎಸ್ ಕಾಯ್ದೆಯಡಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ದಾವೂದ್ ಫರ್ವೇಜ್, ನಝರತ್ ಅಲಿ, ಶಿಫಾನ್ ಮತ್ತು ಅಬ್ದುಲ್ ಸಾದೀಕ್ ಎಂಬವರಲ್ಲಿಯೂ ಮೊಬೈಲ್ ಪತ್ತೆಯಾಗಿದೆ. ಇದಲ್ಲದೆ, ಕಂಕನಾಡಿ ನಗರ ಠಾಣೆಯಲ್ಲಿ ಕೋಕಾ ಪ್ರಕರಣದಲ್ಲಿ ಆರೋಪಿಯಾಗಿದ್ದು ಜೈಲಿನಲ್ಲಿರುವ ಅರ್ಫಾಜ್ ಎಂಬಾತನಲ್ಲಿಯೂ ಮೊಬೈಲ್ ಪತ್ತೆಯಾಗಿದೆ.

ವಶಪಡಿಸಿಕೊಂಡಿರುವ ಮೊಬೈಲ್ ಫೋನ್ಗಳನ್ನು ಅವುಗಳ ಬಳಕೆ ಮತ್ತು ಪೂರೈಕೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಅ.ಕ್ರ. 82/2026, ಕಲಂ 323 ಬಿಎನ್‌ಎಸ್ ಹಾಗೂ ಕಲಂ 42 ಕರ್ನಾಟಕ ಕಾರಾಗೃಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇತ್ತೀಚೆಗೆ ಜೈಲಿಗೆ ಹೊಸದಾಗಿ ಜೈಲರ್ ಒಬ್ಬರು ವರ್ಗಾವಣೆಗೊಂಡು ಬಂದ ನಂತರ ಅಕ್ರಮ ಚಟುವಟಿಕೆ ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿದೆ.