ದುಬೈ: ಗಡಿ ದಾಟಿದರೂ ನಾಡಿನ ಸಂಸ್ಕೃತಿ, ಭಾಷೆ ಮತ್ತು ಬಾಂಧವ್ಯವನ್ನು ಜೀವಂತವಾಗಿರಿಸುವ ಉದ್ದೇಶದೊಂದಿಗೆ ಕರ್ನಾಟಕ ಸಂಘ ದುಬೈ (KSD) ದುಬೈನ ಮಂಖೂಲ್‌ನಲ್ಲಿರುವ ಬಿ-ಟೌನ್ ಸಭಾಂಗಣದಲ್ಲಿ ಸೆಪ್ಟೆಂಬರ್ 6 ರಂದು ‘ಡಾರ್ಟ್ಸ್ ಟೂರ್ನಮೆಂಟ್-2026’ ಅನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿತು.

ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಡೆದ ಈ ಕ್ರೀಡಾ ಹಬ್ಬದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 65 ಸ್ಪರ್ಧಾಳುಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಸಮುದಾಯ ಬೆಸೆಯುವ ವೇದಿಕೆ: ಕೇವಲ ಕ್ರೀಡಾಕೂಟವಾಗಿ ಉಳಿಯದೆ, ಈ ಪಂದ್ಯಾವಳಿಯು ಯುಎಇಯಲ್ಲಿರುವ ಕನ್ನಡಿಗರನ್ನು ಒಂದುಗೂಡಿಸುವ, ಪರಸ್ಪರ ಪರಿಚಯಿಸಿಕೊಳ್ಳುವ ಮತ್ತು ಪರಸ್ಪರ ಸಹಕಾರದ ಜಾಲವನ್ನು ಬಲಪಡಿಸುವ ವೇದಿಕೆಯಾಯಿತು.

ವಿದೇಶ ನೆಲದಲ್ಲಿ ಉದ್ಯೋಗ, ವ್ಯವಹಾರದ ಒತ್ತಡದ ನಡುವೆ ಕನ್ನಡಿಗರು ಒಬ್ಬರಿಗೊಬ್ಬರು ನೆರವಾಗುವಂತಹ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸುವುದು ಸಂಘದ ಮೂಲ ಆಶಯವಾಗಿದೆ.
ವಿಶೇಷವಾಗಿ ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಗ್ಯಾಜೆಟ್‌ಗಳಿಗೆ ಅಂಟಿಕೊಂಡಿರುವ ಮಕ್ಕಳನ್ನು ಹೊರ ಜಗತ್ತಿಗೆ ಕರೆತಂದು, ನೈಜ ಕ್ರೀಡೆಯಲ್ಲಿ ತೊಡಗಿಸಿ, ಸ್ನೇಹ, ಸೋಲು-ಗೆಲುವಿನ ಪಾಠವನ್ನು ಕಲಿಸುವುದು ಈ ಕಾರ್ಯಕ್ರಮದ ಮತ್ತೊಂದು ಮಹತ್ವದ ಉದ್ದೇಶವಾಗಿತ್ತು.

ಪುಟ್ಟ ಮಕ್ಕಳಾದ ಹಿತೇಶ್ ಗವಾಸ್ಕರ್, ಶಿವರಾಜ್ ಬಸವರಾಜ್ ಬೆತ್, ಕುಶಾಲ್ ಮಂಜುನಾಥ್ ಮತ್ತು ಸಾನ್ವಿ ಸುರೇಶ್ ಮಸೂರ್ ಅವರು ತೋರಿದ ಉತ್ಸಾಹವು ನೆರೆದಿದ್ದ ಎಲ್ಲರ ಮನ ಗೆದ್ದಿತು.


ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆ: ಕಾರ್ಯಕ್ರಮವನ್ನು ಖ್ಯಾತ ಎನ್‌ಆರ್‌ಐ ಉದ್ಯಮಿ ಮತ್ತು ಯುಎಇ ಕನ್ನಡಿಗರ ಪೋಷಕರಾದ ಡಾ. ಬಿ.ಆರ್. ಶೆಟ್ಟಿ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶ್ರೀ ಶಶಿಧರ್ ನಾಗರಾಜಪ್ಪ, ಪೋಷಕ ಶ್ರೀ ರೊನಾಲ್ಡ್ ಮಾರ್ಟಿಸ್, ಉದ್ಯಮಿ ಶ್ರೀ ರಾಮಚಂದ್ರ ಹೆಗಡೆ, ಉಪಾಧ್ಯಕ್ಷ ಶ್ರೀ ದಯಾ ಕಿರೋಡಿಯನ್, ಜಂಟಿ ಕಾರ್ಯದರ್ಶಿ ಶ್ರೀ ಮಲ್ಲಿಕಾರ್ಜುನ ಗೌಡ ಮತ್ತು ಖಜಾಂಚಿ ಶ್ರೀ ನಾಗರಾಜ ರಾವ್ ಅವರು ಉದ್ಘಾಟಿಸಿದರು.

ಸಂಘಟನೆಯಲ್ಲಿ ತಂಡದ ಶ್ರಮ:ಮಕ್ಕಳ ಕೇಂದ್ರಿತ ಮನರಂಜನಾ ಆಟಗಳು ಮತ್ತು ಕರ್ನಾಟಕದ ಮಹತ್ವ ಸಾರುವ ಚಟುವಟಿಕೆಗಳನ್ನು ಶ್ರೀಮತಿ ಶ್ವೇತಾ ರಾಮ್ ರೂಪಿಸಿದರು. ಸ್ಥಳದ ವ್ಯವಸ್ಥೆಯ ಉಸ್ತುವಾರಿಯನ್ನು ಶ್ರೀ ಲಾರೆನ್ಸ್ ನಜರತ್, ಸಭಾಂಗಣ ಸಿದ್ಧತೆಯನ್ನು ಶ್ರೀ ಸುನಿಲ್ ಗವಾಸ್ಕರ್ ಮತ್ತು ಶ್ರೀ ಸಿದ್ದಲಿಂಗೇಶ್ ವಹಿಸಿಕೊಂಡಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಅಂತ್ರಿಜಾ ಪ್ರಶಾಂತ್ ಅಚ್ಚುಕಟ್ಟಾಗಿ ನೆರವೇರಿಸಿದರು.

ನೋಂದಣಿ ಮತ್ತು ಸ್ವಾಗತವನ್ನು ಕು. ಕಾವ್ಯ ಜೋಗಿ ಮತ್ತು ಶ್ರೀಮತಿ ಹೇಮಲತಾ ವಿ.ಕೆ, ಡಾರ್ಟ್ಸ್ ಬೋರ್ಡ್ ವ್ಯವಸ್ಥೆ ಮತ್ತು ಆಟಗಾರರ ಸಮನ್ವಯವನ್ನು ಶ್ರೀ ಯಶ್ ಕಾರ್ಕೇರಾ ನಿರ್ವಹಿಸಿದರು.

ಕ್ರೀಡಾ ವಿಭಾಗದ ಒಟ್ಟಾರೆ ಸಂಚಾಲಕ ಮತ್ತು ರೆಫರಿಯಾಗಿ ಶ್ರೀ ಅವಿರತ್ ಮನೋಹರ್ ಹೆಗ್ಡೆ ಮತ್ತು ಯಶ್ ಕರ್ಕೆರಾ ಅವರು ಕಾರ್ಯನಿರ್ವಹಿಸಿದರು. ಇವರು ತಮ್ಮ ತಂದೆ ಮತ್ತು ಕರ್ನಾಟಕ ಸಂಘ ದುಬೈ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮನೋಹರ್ ಹೆಗ್ಡೆ ಅವರ ಕ್ರೀಡಾ ಯೋಜನೆಯನ್ನು ಅವರ ಅನುಪಸ್ಥಿತಿಯಲ್ಲಿ ಕಾರ್ಯಗತಗೂಳಿಸಿದರು ,

ಈ ಡಾರ್ಟ್ಸ್ ಕ್ರೀಡೆಯ ಹಿಂದಿನ ರೂವಾರಿ ಅವರೇ ಆಗಿದ್ದಾರೆ. ಅಂಕ-ಅಂಶ ಮತ್ತು ವಿಜೇತರ ಘೋಷಣೆಯನ್ನು ಶ್ರೀಮತಿ ಮಮತಾ ರಜಾಕ್, ಒಟ್ಟಾರೆ ಮೇಲ್ವಿಚಾರಣೆಯನ್ನು ಶ್ರೀಮತಿ ಕಾಂತಾ ಗೌಡ ಮತ್ತು ಶ್ರೀಮತಿ ರೇಷ್ಮಾ ಡಿಸೋಜಾ ನೋಡಿಕೊಂಡರು. ಸಾಮಾಜಿಕ ಜಾಲತಾಣ ಪ್ರಸಾರವನ್ನು ಶ್ರೀ ದಿವ್ಯೇಶ್ ಉದ್ಯಾರ್, ಕರಾವಳಿ ಕೌಝಿನ್ಸ್ ತಂಡ ಮತ್ತು ಖ್ಯಾತ ಯೂಟ್ಯೂಬರ್ ಶ್ರೀ ಸಂತೋಷ್ ಶೆಟ್ಟಿ ಪೊಳಲಿ ಅವರು ನಿರ್ವಹಿಸಿದರು. ಬಿ-ಟೌನ್ ಸಂಸ್ಥೆಗೆ ವಿಶೇಷ ಧನ್ಯವಾದ ತಿಳಿಸಿದರು.

ಈ ಪಂದ್ಯಾವಳಿಯ ಯಶಸ್ಸಿಗೆ ಬಿ-ಟೌನ್ ರೆಸ್ಟೋರೆಂಟ್, ಮಂಖೂಲ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಶ್ರೀ ಹರಿಪ್ರಸಾದ್ ಶೆಟ್ಟಿ ಅವರ ಕೊಡುಗೆ ಅಪಾರ. ವಿಜೇತರು ಮತ್ತು ಎಲ್ಲಾ ಭಾಗವಹಿಸುವವರಿಗೆ ಗಿಫ್ಟ್ ವೋಚರ್‌ಗಳನ್ನು ಪ್ರಾಯೋಜಿಸುವ ಮೂಲಕ ಅವರು ನೀಡಿದ ಉದಾರ ಬೆಂಬಲಕ್ಕೆ ಕರ್ನಾಟಕ ಸಂಘ ದುಬೈ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತದೆ.


ಬಹುಮಾನ ವಿತರಣೆಯನ್ನು ಶ್ರೀ ಹರಿಪ್ರಸಾದ್ ಶೆಟ್ಟಿ, ಇಮಾರ್ ಸಂಸ್ಥೆಯ ಹಿರಿಯ ವಾಣಿಜ್ಯ ನಿರ್ದೇಶಕ ಮತ್ತು ಸಂಘದ ಹಿತೈಷಿ ಶ್ರೀ ಬಸವರಾಜ ಬೆತ್, ಶ್ರೀ ಶಶಿಧರ್ ನಾಗರಾಜಪ್ಪ, ಶ್ರೀ ದಯಾ ಕಿರೋಡಿಯನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ನೆರವೇರಿಸಿದರು.

ವಿಜೇತರ ವಿವರ: ಪುರುಷರ ಸಿಂಗಲ್ಸ್:
ಪ್ರಥಮ- ಆದೇಶ್ ಹಸನ್, ದ್ವಿತೀಯ- ನಾಗರಾಜ ರಾವ್ ಉಡುಪಿ, ತೃತೀಯ- ಆಕಾಶ್.
ಮಹಿಳಾ ಸಿಂಗಲ್ಸ್
ಪ್ರಥಮ- ಹೇಮಲತಾ ವಿ.ಕೆ, ದ್ವಿತೀಯ- ಮಮತಾ ಅಬ್ದುಲ್ ರಜಾಕ್, ತೃತೀಯ- ಚೇತನಾ ಗವಾಸ್ಕರ್
ಮಿಶ್ರ ಡಬಲ್ಸ್:
ಪ್ರಥಮ- ಮಮತಾ ಅಬ್ದುಲ್ ರಜಾಕ್ ಮತ್ತು ಪುಟ್ಟು ರಾಜು ಗೌಡ, ದ್ವಿತೀಯ- ರಾಜೇಶ್ವರಿ ಬಂಡೇಶ್ವರ ಮತ್ತು ರಘುವೀರ್ ಸಿಂಗ್, ತೃತೀಯ- ದಿವ್ಯಶ್ರೀ ನಾಗರಾಜ್ ಮತ್ತು ಮಲ್ಲಿಕಾರ್ಜುನ ಗೌಡ
ಮಕ್ಕಳ ವಿಭಾಗ:
ಪ್ರಥಮ- ಹಿತೇಶ್ ಗವಾಸ್ಕರ್, ದ್ವಿತೀಯ- ಶಿವರಾಜ್ ಬಸವರಾಜ್ ಬೆತ್, ತೃತೀಯ- ಕುಶಾಲ್ ಮಂಜುನಾಥ್, ಭಾಗವಹಿಸುವಿಕೆ- ಸಾನ್ವಿ ಸುರೇಶ್ ಮಸೂರ್.
ಒಟ್ಟಾರೆ ಉತ್ಸಾಹಿ ಆಟಗಾರ ಪ್ರಶಸ್ತಿ- ಶ್ರೀ ಆಯುಬ್.
ಕಾರ್ಯಕ್ರಮವು ಕೇವಲ ಕ್ರೀಡೆಯಾಗಿ ಉಳಿಯದೆ, ವಿದೇಶದಲ್ಲಿ ಕನ್ನಡಿಗರ ನಡುವೆ ವಿಶ್ವಾಸ, ಸಹಬಾಳ್ವೆ ಮತ್ತು ಸಾಂಸ್ಕೃತಿಕ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಿತು.
- ಕರ್ನಾಟಕ ಸಂಘ ದುಬೈ

