ಪಾಂಡೇಶ್ವರ: ಮಹಾಕಾಳಿಪಡ್ಡು ರೈಲ್ವೇ ಅಂಡರ್‌ಪಾಸ್ ಮೂಲಕ ವಾಹನ ಸಂಚಾರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇದರ ಜತೆಗೆ ಪಂಪ್‌ವೆಲ್- ಕಂಕ ನಾಡಿ ರಸ್ತೆ ಕಾಮಗಾರಿಯಿಂದಾಗಿ ಮಹಾ ಕಾಳಿಪಡ್ಪು ಅಂಡರ್‌ಪಾಸ್‌ ರಸ್ತೆಯನ್ನು ಬಳಕೆ ಮಾಡುವವರ ಸಂಖ್ಯೆ ಅಧಿಕವಾಗಿದೆ. ಪರಿಣಾಮವಾಗಿ ಪಾಂಡೇಶ್ವರ ರೈಲ್ವೇ ಲೆವೆಲ್ ಕ್ರಾಸಿಂಗ್ ಬಳಿ ಸಂಚಾರ ಸಂಕಷ್ಟ ಇದೀಗ ಗಣನೀಯವಾಗಿ ಕಿರಿಕಿರಿ ಸೃಷ್ಟಿಸುತ್ತಿದೆ.

ಮಂಗಳೂರು ಸೆಂಟ್ರಲ್ ಸ್ಟೇಷನ್‌ನಿಂದ ಬಂದರು ಗೂಡ್ಸ್ ಶೆಡ್‌ಗೆ ಹೋಗುವ ಖಾಲಿ ರೈಲುಗಳ ಓಡಾಟದಿಂದಾಗಿ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುವ ಹಲವು ಕಾಲದಿಂದ ಎದುರಾಗಿದ್ದ ಸಮಸ್ಯೆಗೆ ಪಾಂಡೇಶ್ವರ ಹಾಗೂ ಹೊಗೆ ಬಜಾರ್‌ನಲ್ಲಿ ಮುಕ್ತಿಯೇ ದೊರಕಿಲ್ಲ. ದಿನನಿತ್ಯ ವಾಹನ ಸವಾರರು ನಗರ ಪ್ರವೇಶಕ್ಕೆ ಹಿಡಿಶಾಪ ಹಾಕುತ್ತ ತೆರಳಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಜನಪ್ರತಿನಿಧಿಗಳು ಹಲವು ಬಾರಿ ಹಲವು ಸುತ್ತಿನ ಸಭೆ ನಡೆಸಿದರೂ ಸಮಸ್ಯೆಗೆ ಪರಿಹಾರ ದೊರಕಲೇ ಇಲ್ಲ!

ಸದ್ಯ ಮಹಾಕಾಳಿಪಡ್ಡು ರೈಲ್ವೇ ಅಂಡರ್ ಪಾಸ್ ತೆರೆದು ವಾಹನ ಸಂಚಾರ ಆರಂಭವಾಗಿದೆ. ಕಳೆದ ಹಲವು ಸಮಯ ದಿಂದ ಈ ರಸ್ತೆಯ ಮೂಲಕ ಕಾರು ಸಹಿತ ಇತರ ವಾಹನಗಳು ಪಾಂಡೇಶ್ವರದತ್ತ ಬರುತ್ತಿರಲಿಲ್ಲ. ಆದರೆ, ರೈಲ್ವೇ ಅಂಡರ್‌ಪಾಸ್ ತೆರೆದ ಕೂಡಲೇ ವಾಹನಗಳ ಸಂಖ್ಯೆ ಇಲ್ಲಿ ಏರಿಕೆಯಾಗಿದೆ. ಇದರ ಪರಿಣಾಮ ಪಾಂಡೇಶ್ವರ ರೈಲ್ವೇ ಲೆವೆಲ್ ಕ್ರಾಸಿಂಗ್ ಗೆ ತಟ್ಟಿದೆ.

ಇದರ ಜತೆಗೆ ಪಂಪ್‌ವೆಲ್ ಕಂಕನಾಡಿ ರಸ್ತೆ ಸದ್ಯ ಕಾಮಗಾರಿ ಕಾರಣದಿಂದ ಬಂದ್ ಮಾಡಲಾಗಿದೆ. ಹೀಗಾಗಿ ತೊಕ್ಕೊಟು ಕಡೆಯಿಂದ ಸಿಟಿ ಪ್ರವೇಶಿಸುವ ಹಲವು ವಾಹನಗಳು ಜಪ್ಪುವಿನಲ್ಲಿ ಎಡಕ್ಕೆ ತಿರುಗಿ ಮಹಾಕಾಳಿಪಡ್ಪು ಮೂಲಕವೇ ಸಿಟಿಗೆ ಬರುತ್ತಿದೆ. ಮೊದಲೇ ಪಾಂಡೇಶ್ವರದಲ್ಲಿ ರೈಲ್ವೇ ಲೆವೆಲ್ ಕ್ರಾಸಿಂಗ್ ಗಾಗಿ ಕ್ಯೂ ನಿಂತ ವಾಹನಗಳ ಸಂಖ್ಯೆ ಇದರಿಂದಾಗಿದೆ ದುಪ್ಪಟ್ಟಾಗಿದೆ. ನಿಮಿಷಗಟ್ಟಲೆ ಬ್ಲಾಕ್ ಇಲ್ಲಿ ಮಾಮೂಲಿ ಆದಂತಾಗಿದೆ.

ಪಾಂಡೇಶ್ವರದಲ್ಲಿ ದಿನಕ್ಕೆ ಕನಿಷ್ಠ 16 ಬಾರಿ ರೈಲ್ವೇ ಗೇಟ್ ಹಾಕಲಾಗುತ್ತದೆ. ಹಳೆಯ ಕಾಲದ ಗೇಟ್ ನಿಂದಾಗಿ ಅದು ಕೆಲವೊಮ್ಮೆ ಮೇಲೆ ಕೆಳಗೆ ಹೋಗುದೂ ಇಲ್ಲ. ಒಮ್ಮೆ ಗೇಟ್ ಹಾಕಿದರೆ ಈಗ ವಾಹನಗಳ ಸರತಿ ಸಾಲು ಪಾಂಡೇಶ್ವರ ಕಟ್ಟೆಯ ಸಮೀಪದ ಫೋರಂ ಮಾಲ್ ವರೆಗೆ ಹಾಗೂ ಮತ್ತೂಂದು ಭಾಗದಲ್ಲಿ ಎಮ್ಮೆಕೆರೆ ಒಳ ರಸ್ತೆ ಇರುವಲ್ಲಿಯವರೆಗೆ ದಟ್ಟಣೆ ಇರುತ್ತದೆ. ಬೆಳಗ್ಗೆ ಶಾಲೆಗೆ ಹೋಗುವವರು, ಸಂಜೆ ಕೆಲಸ ಬಿಟ್ಟು ಹೋಗುವವರು ಇಲ್ಲಿ ಕನಿಷ್ಠ 20 ನಿಮಿಷ ರಸ್ತೆಯಲ್ಲೇ ಬಾಕಿ. ಇನ್ನು ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕದಳದ ವಾಹನ ಇಲ್ಲಿ ಸರತಿ ಸಾಲಿನಲ್ಲಿಯೇ ಬಾಕಿಯಾಗುವ ಪ್ರಸಂಗ ಹಲವು ಬಾರಿ ಸಾಮಾನ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು.

ಪಾಂಡೇಶ್ವರ ರೈಲ್ವೇ ಲೆವೆಲ್ ಕ್ರಾಸಿಂಗ್ ಗೇಟ್ ಮೂಲಕ ದಿನಕ್ಕೆ ಕನಿಷ್ಠ 16 ಬಾರಿಯಾದರೂ ಖಾಲಿ ಪ್ಯಾಸೆಂಜರ್, ಖಾಲಿ ಎಂಜಿನ್ ಮತ್ತು ಗೂಡ್ಸ್ ರೈಲುಗಳು ಬಂದರ್‌ಯಾರ್ಡ್ ಗೆ ಹೋಗುವುದರಿಂದ ಪ್ರತೀ ಬಾರಿ ಕನಿಷ್ಠ 15 ರಿಂದ 20 ನಿಮಿಷ ಟ್ರಾಫಿಕ್ ಜಾಮ್ ಉಂಟಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನಗಳು ತೊಂದರೆಗೀಡಾಗುತ್ತಿವೆ. ರೈಲ್ವೇ ಇಲಾಖೆಗೆ ಈ ಬಗ್ಗೆ ಪೂರ್ಣ ಮಾಹಿತಿ ನೀಡಲಾಗಿದೆ. ಆದರೂ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸದ್ಯ ಮಹಾಕಾಳಿಪಡ್ಡು ರೈಲ್ವೇ ಗೇಟ್ ತೆರೆದಿರುವುದರಿಂದ ಪಾಂಡೇಶ್ವರದಲ್ಲಿ ವಾಹನಗಳ ಸಂಖ್ಯೆಯೂ ದುಪ್ಪಟ್ಟಾಗಿದೆ.