ಕಾಸರಗೋಡು: ಕಾಸರಗೋಡಿನ ಅಡೂರಿನ ರವಿ ಎಂಬುವವರ ಮನೆಯಲ್ಲಿ ‘ಚಿನ್ನದ ಉಂಗುರ ಧರಿಸಿದ್ದ’ ಜೀವಂತ ಹಾವು ಕಂಡುಬಂದಿದೆ.

ಮನೆಯ ಮಕ್ಕಳು ಆಟವಾಡುತ್ತಾ ರೂಮಿನಲ್ಲಿದ್ದ ಟೇಬಲ್ ಒಂದರ ಡ್ರಾಯರ್ ಎಳೆದಿದ್ದಾರೆ. ಅಲ್ಲಿ ಒಂದು ದೊಡ್ಡ ಕೇರೆ ಹಾವು ಸುರುಳಿ ಸುತ್ತಿಕೊಂಡು ಕುಳಿತಿತ್ತು. ಆದರೆ ಮಕ್ಕಳ ಕಣ್ಣು ಹಾವಿಗಿಂತ ಹೆಚ್ಚಾಗಿ ಅದರ ಮೈಮೇಲೆ ಮಿನುಗುತ್ತಿದ್ದ ವಸ್ತುವಿನ ಮೇಲೆ ನೆಟ್ಟಿತ್ತು. ಆ ಹಾವಿನ ದೇಹದ ಮಧ್ಯಭಾಗದಲ್ಲಿ ಚಿನ್ನದ ಉಂಗುರವೊಂದು ಬಿಗಿಯಾಗಿ ಸಿಲುಕಿಕೊಂಡಿತ್ತು.

ಹಸಿವಿನಿಂದ ಆಹಾರ ಹುಡುಕುತ್ತಾ ಡ್ರಾಯರ್‌ನ ಸಣ್ಣ ಕಿಂಡಿಯ ಮೂಲಕ ಒಳಬಂದ ಹಾವು, ಅಲ್ಲಿಟ್ಟಿದ್ದ ಉಂಗುರದ ನಡುವೆ ನುಸುಳಿರಬಹುದು ಎಂದು ಊಹಿಸಲಾಗಿದೆ. ಒಳಗೆ ನುಸುಳುವಾಗ ಸುಲಭವಾಗಿ ಹೋದ ಉಂಗುರ, ಹಾವಿನ ಮೈ ಮಧ್ಯಭಾಗಕ್ಕೆ ಬಂದಾಗ ಬಿಗಿಯಾಗಿದೆ. ಇದರಿಂದಾಗಿ ಹಾವು ಮುಂದೆ ಸಾಗಲಾರದೆ ಅಥವಾ ಉಂಗುರವನ್ನು ಕಳಚಿಕೊಳ್ಳಲಾರದೆ ಅಲ್ಲಿಯೇ ಸಿಲುಕಿಕೊಂಡಿದೆ ಎನ್ನಲಾಗಿದೆ.

​”ಮಕ್ಕಳು ಹಾವನ್ನು ಕಂಡು ಭಯಗೊಂಡರೂ, ಅದನ್ನು ಮುಟ್ಟಲು ಹೋಗದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಹಾವಿನ ಚಲನೆಗೆ ಆ ಉಂಗುರ ಅಡ್ಡಿಯಾಗುತ್ತಿತ್ತು.” ವಿಷಯ ತಿಳಿದ ತಕ್ಷಣ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಅತ್ಯಂತ ನಾಜೂಕಿನಿಂದ ಹಾವನ್ನು ಡ್ರಾಯರ್‌ನಿಂದ ಹೊರತೆಗೆದರು. ಹಾವಿನ ಮೈಗೆ ಯಾವುದೇ ಗಾಯವಾಗದಂತೆ ಎಚ್ಚರ ವಹಿಸಿ, ವಿಶೇಷ ಕತ್ತರಿಯ ಸಹಾಯದಿಂದ ಚಿನ್ನದ ಉಂಗುರವನ್ನು ಕತ್ತರಿಸಿ ಹಾವನ್ನು ಬಂಧಮುಕ್ತಗೊಳಿಸಲಾಯಿತು.