ಮಂಗಳೂರು : ಮಳೆಗಾಲಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಪಾಲಿಕೆ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಹಾಗೂ ಚರಂಡಿಗಳಲ್ಲಿ ಹೂಳೆತ್ತುವುದು, ಪ್ರತೀ ವಾರ್ಡ್ ಗಳಿಗೆ ಗ್ಯಾಂಗ್ ಮೆನ್ ನೇಮಿಸುವುದು, ಸೇರಿದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಅನೇಕ ಬಾರಿ ಸೂಚಿಸಿದ ಹೊರತಾಗಿಯೂ ಪಾಲಿಕೆಯ ಆಡಳಿತ ಆ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್ ಗಳಲ್ಲಿ ಮುಖ್ಯವಾಗಿ ಇರಬೇಕಿದ್ದ ಗ್ಯಾಂಗ್ ಮೆನ್ ಗಳ ಟೆಂಡರ್ ಪ್ರಕ್ರಿಯೆಯನ್ನೇ ಇನ್ನೂ ಸಹ ಕೈಗೆತ್ತಿಕೊಳ್ಳದಿರುವುದು ಆಡಳಿತ ವೈಫಲ್ಯ ಹಾಗೂ ನಿರ್ಲಕ್ಷ್ಯವನ್ನು ಸೂಚಿಸುತ್ತದೆ. ಹೂಳೆತ್ತುವ ಕಾಮಗಾರಿಯೂ ಸಹ ಕಾಟಾಚಾರಕ್ಕೆ ಮಾತ್ರ ಎಂಬಂತಾಗಿದ್ದು, ಅದು ಒಮ್ಮೆ ಮಾತ್ರ ನಡೆಸುವ ಪ್ರಕ್ರಿಯೆ ಅಲ್ಲ. ಟೆಂಡರ್ ನ ಷರತ್ತಿನಲ್ಲಿ ಮಳೆಗಾಲ ಮುಗಿಯುವ ತನಕ ಕಾಲಕಾಲಕ್ಕೆ ಹೂಳೆತ್ತಬೇಕು ಎಂಬ ನಿಯಮವಿದೆ.

ಕೆಲವು ಕಡೆ ಜೆಸಿಬಿ ಹೋಗಲಾಗದ ಸ್ಥಳಗಳಲ್ಲಿ ಹೂಳೆತ್ತದೇ, ಮುಂದಕ್ಕೆ ಹೋಗುವ ಉದಾಹರಣೆ ಸಾಕಷ್ಟಿವೆ. ಇದು ಹೀಗೆ ಮುಂದುವರಿದರೆ ಮಳೆಯ ಸಂದರ್ಭದಲ್ಲಿ ಕೃತಕ ನೆರೆಗೆ ಕಾರಣವಾಗುತ್ತದೆ. ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಆಗ್ರಹಿಸುತ್ತೇನೆ.

ಇತ್ತೀಚಿಗೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೃಹತ್ ತಡೆಗೋಡೆಯೊಂದು ಕುಸಿದು ಸಾರ್ವಜನಿಕರ ಜೀವ ಹಾನಿಯಾಗಿತ್ತು. ಇಂತಹ ದುರ್ಘಟನೆಗಳು ಮಂಗಳೂರಿನಲ್ಲಿ ಮರುಕಳಿಸದಂತೆ ನಗರ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಸಹಿತ ಎಲ್ಲಾ ರೀತಿಯ ಕ್ರಮವಹಿಸಬೇಕಾದ ಅನಿವಾರ್ಯತೆಯಿದೆ. ಆದರೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಕನಿಷ್ಠ ಕಾಳಜಿಯೂ ಇದ್ದಂತೆ ಕಾಣುತ್ತಿಲ್ಲ. ಅವರು ಒಮ್ಮೆಯಾದರೂ ಪಾಲಿಕೆ ಅಧಿಕಾರಿಗಳ, ಸ್ಥಳೀಯ ಜನಪ್ರತಿನಿಧಿಗಳು ಸಭೆ ನಡೆಸಬೇಕಿತ್ತು. ಅವರಿಗೇ ಅಂತಹ ಚಿಂತನೆ ಇಲ್ಲವಾದ ಮೇಲೆ ಇಡೀ ಆಡಳಿತ ವ್ಯವಸ್ಥೆ ಸಹ ಅದೇ ಧೋರಣೆ ತಾಳುತ್ತದೆ. ಇದರಿಂದಾಗಿ ಮಂಗಳೂರಿನ ಜನತೆ ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು