ಬೆಂಗಳೂರು: ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಎಬೋಲಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಹಾಗೂ ಕರ್ನಾಟಕ ರಾಜ್ಯದಲ್ಲಿ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾಹಿತಿ ನೀಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಎಬೋಲಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಸಂಪೂರ್ಣ ಅಲರ್ಟ್ ಆಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರುವುದಾಗಿ ಭರವಸೆ ನೀಡಿದ್ದಾರೆ.
ಪ್ರಸ್ತುತ ಎಬೋಲಾ ವೈರಸ್ ಆಫ್ರಿಕಾದ ಕಾಂಗೋ ಮತ್ತು ಉಗಾಂಡ ದೇಶಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡಿದ್ದು, ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ಆದರೆ ನಮ್ಮ ದೇಶದಲ್ಲಿ ಇದುವರೆಗೆ ಎಲ್ಲೂ ಸಹ ಈ ಮಾರಕ ವೈರಸ್‌ನ ಒಂದೇ ಒಂದು ಪ್ರಕರಣವೂ ಪತ್ತೆಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.
ಕೋವಿಡ್ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳನ್ನು ಯಶಸ್ವಿಯಾಗಿ ಎದುರಿಸಿರುವ ರಾಜ್ಯ ಆರೋಗ್ಯ ಇಲಾಖೆ, ಈಗ ಎಬೋಲಾ ನಿಯಂತ್ರಣಕ್ಕೂ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸದ್ಯಕ್ಕೆ ಎಬೋಲಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಯಾವುದೇ ಹೊಸ ಅಥವಾ ಕಠಿಣ ನಿಯಮಗಳು ಬಂದಿಲ್ಲವಾದರೂ, ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸುವ ಪ್ರತಿಯೊಂದು ಮಾರ್ಗಸೂಚಿಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

