ಮಂಗಳೂರು : ಆರೆಸ್ಸೆಸ್, ಬಿಜೆಪಿ ದ.ಕ. ಜಿಲ್ಲೆಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕೀಳು ಹೇಳಿಕೆ ನೀಡಿರುವುದು ಖಂಡನೀಯ. ಆರೆಸ್ಸೆಸ್, ಬಿಜೆಪಿ ಬಗ್ಗೆ ಮಾತನಾಡಲು ಕಾಂಗ್ರೆಸ್ನವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೆಸ್ಸೆಸ್ ದೆವ್ವ, ಬಿಜೆಪಿ ದೆವ್ವದ ನೆರಳು’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರ ತಂದೆ ಎಐಸಿಸಿ ಅಧ್ಯಕ್ಷರಾಗಿದ್ದರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಧೀನದಲ್ಲೇ ಕೆಲಸ ಮಾಡೋದು. ಆರೆಸ್ಸೆಸ್, ಬಿಜೆಪಿ ಟೀಕಿಸುವ ಪ್ರಿಯಾಂಕ್ ಖರ್ಗೆ ತಮ್ಮ ತಂದೆಗೆ- ನೀವು ಸೋನಿಯಾ, ರಾಹುಲ್ ಗಾಂಧಿ ನೆರಳು ಅಂತ ಹೇಳಿದ್ದಾರಾ ಎಂದು ಟೀಕಿಸಿದರು.
ಆರೆಸ್ಸೆಸ್ ಸಂಘಟನೆಗೆ ನೋಂದಣಿಯ ಅಗತ್ಯವಿಲ್ಲ. ದೇಶಾಭಿಮಾನಿ ಸ್ವಯಂ ಸೇವಕರ ಆಧಾರದಲ್ಲಿ ಆರೆಸ್ಸೆಸ್ ನಡೆಯುತ್ತಿದ್ದು, ಕಾಂಗ್ರೆಸಿಗರಿಗೆ ಮಾತನಾಡಲು ಯಾವ ನೈತಿಕ ಹಕ್ಕೂ ಇಲ್ಲ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಕೋಮು ಭಾವನೆಯಿಂದ ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಪ್ರಿಯಾಂಕ್ ಖರ್ಗೆ ಕಳೆದ ಎರಡೂವರೆ ವರ್ಷಗಳಿಂದ ಐಟಿ ಬಿಟಿ ಸಚಿವರಾಗಿದ್ದಾರೆ. ದ.ಕ. ಜಿಲ್ಲೆಗೆ ಮಂತ್ರಿಯಾಗಿ ಏನು ಕೊಡುಗೆ ನೀಡಿದ್ದೀರಿ? ಎಷ್ಟು ಐಟಿ ಬಿಟಿ ಸಂಸ್ಥೆಗಳನ್ನು ಕೊಟ್ಟಿದ್ದೀರಿ? ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದ್ದೀರಿ? ಎಷ್ಟು ಬಂಡವಾಳ ಹೂಡಿಕೆ ತಂದಿದ್ದೀರಿ ಎಂಬ ಬಗ್ಗೆ ಅಂಕಿ ಅಂಶ ಕೊಡಿ ಎಂದು ಸವಾಲು ಹಾಕಿದರು.
ಜಿಲ್ಲೆಯಲ್ಲಿ ಗಲಭೆ, ಅಶಾಂತಿ ನಿರ್ಮಾಣ ಆಗಿರೋದು ಕಾಂಗ್ರೆಸ್ ಅವಧಿಯಲ್ಲಿ ಎಂದು ಆರೋಪಿಸಿದ ಸತೀಶ್ ಕುಂಪಲ, ದ.ಕ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜುಗಳಿವೆ, ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಎಷ್ಟಿವೆ? ಶಿಕ್ಷಣಕ್ಕೆ ದೇಶದೆಲ್ಲೆಡೆಯಿಂದ ದ.ಕ.ಕ್ಕೆ ಬರುತ್ತಾರೆ, ಕಲಬುರಗಿಗೆ ಹೋಗ್ತಾರಾ? ಅತೀ ಹಿಂದುಳಿದ ಜಿಲ್ಲೆಗಳ ಪೈಕಿ ಕಲಬುರಗಿ ಇದೆ. ತಮ್ಮ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಆಗದವರು ದ.ಕ. ಜಿಲ್ಲೆಯ ಬಗ್ಗೆ ಕೀಳಾಗಿ ಮಾತನಾಡೋದು ಸಲ್ಲದು ಎಂದರು.
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಕಾರ್ಯದರ್ಶಿ ದಿನೇಶ್ ಅಮ್ಟೂರು, ಕೋಶಾಧಿಕಾರಿ ಸಂಜಯ್ ಪ್ರಭು, ಮಾಧ್ಯಮ ಸಂಚಾಲಕ ವಸಂತ ಜೆ.ಪೂಜಾರಿ ಇದ್ದರು.

