ಮಂಗಳೂರು: ದಸರಾ ರಜೆ ಹೊತ್ತಲ್ಲಿ ಪದವಿ ಸೆಮಿಸ್ಟರ್ ಪರೀಕ್ಷೆಯನ್ನು ಮಂಗಳೂರಿನ ಬೆಂದೂರ್ ವೆಲ್ ಬಳಿಯ ಸೈಂಟ್ ಆಗ್ನೆಸ್ ಕಾಲೇಜು ಆಯೋಜಿಸಿದೆ. ಕಾಲೇಜು ಆಡಳಿತದ ನಡೆಗೆ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಇಂದಿನಿಂದ ಅ.28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ಆಯೋಜನೆ ಮಾಡಲಾಗಿದೆ. ಮಂಗಳೂರು ದಸರಾ ಸಂಭ್ರಮದ ಹೊತ್ತಲ್ಲಿ ಪರೀಕ್ಷೆ ಆಯೋಜನೆಗೆ ಆಕ್ರೋಶ ವ್ಯಕ್ತವಾಗಿದೆ. ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟ್ ಎದುರು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಬಿವಿಪಿ ವಿದ್ಯಾರ್ಥಿ ಸಂಘಟನೆಯಿಂದಲೂ ಪ್ರತಿಭಟನೆಗೆ ಬೆಂಬಲ ನೀಡಲಾಯಿತು. ದಸರಾ ರಜೆ ಕೂಡ ನೀಡದೇ ಪರೀಕ್ಷೆ ನಡೆಸಲು ಕಾಲೇಜು ಆಡಳಿತ ಮುಂದಾಗಿದೆ. ಮನವಿ ಸಲ್ಲಿಸಿದರೂ ಪರೀಕ್ಷೆ ಮುಂದೂಡದೇ ಕಾಲೇಜು ಆಡಳಿತದ ಉದ್ದಟತನ ಆರೋಪ ಕೇಳಿಬಂದಿದೆ. ದಸರಾ ಆಚರಣೆ ಹಾಗೂ ಸಂಭ್ರಮದಲ್ಲಿ ಭಾಗವಹಿಸಲು ಪರೀಕ್ಷೆಯಿಂದ ಸಮಸ್ಯೆ ಉಂಟಾಗಿದೆ.
ದ.ಕ ಜಿಲ್ಲಾಧಿಕಾರಿಗೂ ವಿದ್ಯಾರ್ಥಿ ಸಂಘಟನೆಗಳು ದೂರು ನೀಡಿದೆ. ಸದ್ಯ ಕಾಲೇಜು ಗೇಟ್ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸ್ತಿದ್ದಾರೆ. ಎಬಿವಿಪಿ ವಿದ್ಯಾರ್ಥಿಗಳನ್ನು ಬಂಧಿಸಲು ಪೊಲೀಸರು ಕರೆದೊಯ್ದರು. ಈ ವೇಳೆ ಪೊಲೀಸ್ ಜೀಪ್ ಗೆ ಅಡ್ಡ ನಿಂತು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಬಂದ್ ಮಾಡಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಡಿಸಿಪಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಯಾವುದೇ ಕಾರಣಕ್ಕೆ ಅರೆಸ್ಡ್ ಮಾಡಲು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಬಿವಿಪಿ ನಾಯಕರ ಬಂಧನಕ್ಕೆ ವಿದ್ಯಾರ್ಥಿಗಳು ಅವಕಾಶ ನೀಡಲಿಲ್ಲ. ಪೊಲೀಸ್ ಜೀಪ್ ಎದುರೇ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡೆಗೂ ವಿದ್ಯಾರ್ಥಿಗಳ ಆಕ್ರೋಶ ಕ್ಕೆ ಪೊಲೀಸರು ಮಣಿದಿದ್ದಾರೆ. ಪೊಲೀಸ್ ಜೀಪ್ ಬದಿಗೆ ಹಾಕಿದರು. ವಿದ್ಯಾರ್ಥಿಗಳ ಪ್ರತಿಭಟನೆ ಮಧ್ಯೆಯೂ ಪರೀಕ್ಷೆ ನಡೆಸಲು ಕಾಲೇಜು ಮುಂದಾಗಿದೆ. ಪರೀಕ್ಷೆ ಮುಂದೂಡಲು ಕಾಲೇಜು ಆಡಳಿತ ನಕಾರ ವ್ಯಕ್ತಪಡಿಸಿದ್ದು, ಆದರೆ ಪ್ರತಿಭಟನೆ ಕೈ ಬಿಡಲ್ಲ ಅಂತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

