ಮಂಗಳೂರು: ಬೆಂಗಳೂರಿನ ಯಲಹಂಕದ ‘ಸೆಂಟರ್ ಫಾರ್ ಸ್ಪೋರ್ಟ್ಸ್ ಅಕಾಡೆಮಿ’ಯಲ್ಲಿ ಆಯೋಜಿಸಲಾಗಿದ್ದ ‘ದ್ವಿತೀಯ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಷಿಪ್–2026’ರಲ್ಲಿ ನಗರದ ಎ ಎಸ್ ಐ ಗಿರೀಶ್ ಸುವರ್ಣ ಅವರು ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದು ಸಾಧನೆ ಮೆರೆದಿದ್ದಾರೆ.
ಅಕ್ಟೋಬರ್ 4ರಿಂದ 10ರವರೆಗೆ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, 50 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದುಕೊಂಡರೆ, 50 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗಿರೀಶ್ ಸುವರ್ಣ ಅವರು ಅಂತರರಾಷ್ಟ್ರೀಯ ಮಟ್ಟದ ಈ ಕೂಟದಲ್ಲಿ ಅವಳಿ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಪೊಲೀಸ್ ಇಲಾಖೆ ಹಾಗೂ ಕರಾವಳಿಗೆ ಹೆಮ್ಮೆ ತಂದಿದ್ದಾರೆ.

