ಮಂಗಳೂರು: ಮೂಲ್ಕಿ ಟೂರಿಸ್ಟ್ ಕಾರು ಪಾರ್ಕಿಂಗ್ ಬಳಿ ನಡೆದಿದ್ದ ಕೊಲೆ ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ತೀರ್ಪು ನೀಡಿದ್ದಾರೆ.

ತಮಿಳುನಾಡಿನ ಮುರುಗನ್ (47) ಶಿಕ್ಷೆಗೊಳಗಾದ ಅಪರಾಧಿ. ಈತ ಹಣಕಾಸಿನ ವಿಚಾರದಲ್ಲಿ ಉಲ್ಲಂಜೆಯ ಹರೀಶ್ ಸಾಲ್ಯಾನ್ ಎಂಬವರನ್ನು 2022 ಮಾ.19ರಂದು ಮುಖಕ್ಕೆ ಸಿಮೆಂಟ್ ಕಾಂಕ್ರೀಟ್ ಸಹಿತ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ಇನ್‌ಸ್ಪೆಕ್ಟರ್ ಕುಸುಮಾಧರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಸಂದರ್ಭ ಎಎಸ್‌ಐ ಸಂಜೀವ್ ಅವರು ತನಿಖೆಗೆ ಸಹಕರಿಸಿದ್ದರು. ಸರ್ಕಾರದ ಪರವಾಗಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದ್ದರು.