ಜಕಾರ್ತಾ: ಸುಮಾರು 240 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡೋನೇಷ್ಯಾದ ಪ್ರಯಾಣಿಕ ಹಡಗೊಂದು ಜಾವಾ ಸಮುದ್ರದಲ್ಲಿ ಸಂಪರ್ಕ ಕಳೆದುಕೊಂಡಿದ್ದು, ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ. ಪೂರ್ವ ಜಾವಾದಿಂದ ಬೊರ್ನಿಯೊ ದ್ವೀಪದತ್ತ ಸಾಗುತ್ತಿದ್ದ ಹಡಗು ಪ್ರತಿಕೂಲ ಹವಾಮಾನಕ್ಕೆ ಸಿಲುಕಿದ ಬಳಿಕ ಸಂವಹನ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಹಡಗನ್ನು ‘ವಿರ್ಗೋ ಟ್ರಾನ್ಸ್‌ಪೋರ್ಟ್ 8’ ಎಂದು ಗುರುತಿಸಲಾಗಿದೆ. ಸುರಬಯಾದಿಂದ ಹೊರಟಿದ್ದ ಹಡಗು ದಕ್ಷಿಣ ಕಾಲಿಮಂಟನ್‌ನ ಬಂಜರ್‌ಮಾಸಿನ್ ಕಡೆಗೆ ತೆರಳುತ್ತಿತ್ತು. ಸಮುದ್ರದಲ್ಲಿ ಹಠಾತ್ ಹವಾಮಾನ ವೈಪರೀತ್ಯ ಹಾಗೂ ಭಾರಿ ಅಲೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಡಗಿನೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದು ರಕ್ಷಣಾ ಕಚೇರಿ ಅಧಿಕಾರಿ ಐ ಪುಟು ಸುದಾಯನ ತಿಳಿಸಿದ್ದಾರೆ.
ಬಂಜರ್‌ಮಾಸಿನ್ ಬಂದರಿನಿಂದ ಸುಮಾರು 148 ಕಿಲೋಮೀಟರ್ ದೂರದಲ್ಲಿರುವ ಜಾವಾ ಸಮುದ್ರದ ಮಧ್ಯಭಾಗದಲ್ಲಿ ಹಡಗಿನ ಕೊನೆಯ ಜಿಪಿಎಸ್ ಸ್ಥಳ ದಾಖಲಾಗಿತ್ತು. ಹಡಗಿನ ನಿರ್ವಾಹಕ ಸಂಸ್ಥೆ ಪಿಟಿ ವಿರ್ಗೋ ನೀಡಿದ ತುರ್ತು ಮಾಹಿತಿಯ ಆಧಾರದ ಮೇಲೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಬಸಿರಿಹ್ ರಕ್ಷಣಾ ನೆಲೆಯಿಂದ ವಿಶೇಷ ಶೋಧನಾ ಹಡಗುಗಳು ಹಾಗೂ ಮುಳುಗು ತಜ್ಞರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯ ನೆರವನ್ನೂ ಪಡೆಯಲಾಗುತ್ತಿದೆ.
ಹಡಗಿನೊಂದಿಗೆ ಸಂಪೂರ್ಣ ಸಂಪರ್ಕ ಕಡಿತಗೊಂಡಿದ್ದರೂ, ಹಡಗು ಮುಳುಗಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ, ಪ್ರಯಾಣಿಕರು ಅಥವಾ ಸಿಬ್ಬಂದಿಯಲ್ಲಿ ಸಾವುನೋವು ಸಂಭವಿಸಿರುವ ಕುರಿತೂ ಸದ್ಯಕ್ಕೆ ಯಾವುದೇ ವರದಿ ಬಂದಿಲ್ಲ. ಜಾವಾ ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ಹಾಗೂ ಕತ್ತಲು ಆವರಿಸಿರುವುದರಿಂದ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಆದರೂ ರಕ್ಷಣಾ ಪಡೆಗಳು ಹಡಗಿನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿವೆ.
17,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಸಂಚರಿಸಲು ದೋಣಿ ಮತ್ತು ಪ್ರಯಾಣಿಕ ಹಡಗುಗಳು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿವೆ. ಆದರೆ ಹಡಗುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದು, ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಹಠಾತ್ ಉಂಟಾಗುವ ಉಷ್ಣವಲಯದ ಬಿರುಗಾಳಿಗಳಿಂದಾಗಿ ಇಂಡೋನೇಷ್ಯಾದಲ್ಲಿ ಈ ಹಿಂದೆ ಹಲವು ಸಮುದ್ರ ದುರಂತಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಸುಮಾರು 240 ಪ್ರಯಾಣಿಕರಿದ್ದ ಹಡಗು ಸಂಪರ್ಕ ಕಳೆದುಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

