ಮಂಗಳೂರು : ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಹಾಗೂ ದೈವಾರಾಧನೆ ಪರಂಪರೆ ಸಂರಕ್ಷಣೆ ಉದ್ದೇಶದಿಂದ ‘ಕೊಡಿಯಾಡಿತ ನಿರೇಲ್ ಇರುವರದ ಲೇಸ್ ದ ಗೌಜಿ’ ಕಾರ್ಯಕ್ರಮವನ್ನು ಅ.5ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಎಂ. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೈವಸೇವೆಯಲ್ಲಿ ತೊಡಗಿರುವ ಪರಿಚಾರಕರಿಗೆ ಅಪಘಾತ, ಅನಾರೋಗ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ವಿಮೆ, ಮಕ್ಕಳ ಶಿಕ್ಷಣ, ವೈದ್ಯಕೀಯ ನೆರವು ಹಾಗೂ ಬಡ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಳೆದ ಬಾರಿ 400ರಿಂದ 450 ಮಂದಿಗೆ ವಿಮೆ ಮಾಡಿಸಲಾಗಿದ್ದು, ಈ ಬಾರಿ 500ಕ್ಕೂ ಹೆಚ್ಚು ದೈವ ಪರಿಚಾರಕರಿಗೆ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಕಳೆದ ಬಾರಿ ಹೃದಯಾಘಾತದಿಂದ ಮೃತಪಟ್ಟಸುದೇಶ್ ಪೂಜಾರಿ ಕಾವೂರ್ ಶಾಂತಿ ನಗರ ಅವರ ಕುಟುಂಬಕ್ಕೆ ₹1.07 ಲಕ್ಷ ನೆರವು ನೀಡಲಾಗಿತ್ತು. ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ವಿಮಾ ಸೌಲಭ್ಯದ ಜತೆಗೆ ಟ್ರಸ್ಟ್ ವತಿಯಿಂದ ₹50 ಸಾವಿರದವರೆಗೆ ಸಾಂತ್ವನ ನೆರವು ನೀಡುವ ಯೋಜನೆಯೂ ಇದೆ ಎಂದರು .
ಅ.5ರ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಾಮಾಜಿಕ ಜಾಲತಾಣ ಲೋಕಾರ್ಪಣೆ, ಫಲಾನುಭವಿಗಳಿಗೆ ವಿಮಾ ಯೋಜನೆ ಹಸ್ತಾಂತರ, ಸದಸ್ಯರಿಗೆ ಡಿಜಿಟಲ್ ಗುರುತಿನ ಚೀಟಿ ವಿತರಣೆ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಬೆಳಗ್ಗೆ 11.30ಕ್ಕೆ ‘ಚಾ ಪರ್ಕ’ ತಂಡದಿಂದ ತುಳು ಹಾಸ್ಯ ನಾಟಕ ಪ್ರದರ್ಶನವಿದೆ. ಅ.8ರಂದು ಕಾವೂರು ಸೊಸೈಟಿ ಹಾಲ್‌ನಲ್ಲಿ ಅಂಚೆ ಇಲಾಖೆಯ ಸಹಯೋಗದಲ್ಲಿ ವಿಮಾ ಯೋಜನೆ ಹಾಗೂ ಎ.ಜೆ. ಆಸ್ಪತ್ರೆಯ ಸಹಕಾರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ವಿಜಯ್ ಚೌಟ ಕೆಂಜಾರು , ದಿನೇಶ್ ಕಕ್ಕೆಪದವು, ಜಿತೇಶ್ ಮಡ್ಯಾರ್, ಸುದರ್ಶನ್ ಸನಿಲ್ ಅಬ್ಬೆಟ್ಟು ಹಾಗೂ ಹೊನ್ನಯ್ಯ ಪೂಜಾರಿ ಪೆರಾರ ಬಜಪೆ ಉಪಸ್ಥಿತರಿದ್ದರು.

