ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಿನ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿರುವ ಸಂದರ್ಭದಲ್ಲೇ ಮುಸ್ಲಿಂ ವ್ಯಕ್ತಿಯೊಬ್ಬರ ಕೊಲೆ ನಡೆದಿರುವುದು ಆತಂಕಕಾರಿ ಬೆಳವಣಿಗೆ. ಪ್ರಕರಣದಲ್ಲಿ ಬಂಧನಗಳು ನಡೆದಿರುವುದು ಸ್ವಾಗತಾರ್ಹವಾದರೂ, ಕೊಲೆಯ ಹಿಂದಿರುವ ಸಂಪೂರ್ಣ ಜಾಲ, ಹಣಕಾಸಿನ ಮೂಲ ಮತ್ತು ಸಂಚಿನ ಹಿಂದಿರುವ ವ್ಯಕ್ತಿಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರ ತನಿಖೆ ನಡೆಸಬೇಕು ಎಂದು ಎಸ್‌ಡಿಪಿಐ ಗ್ರಾಮೀಣ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಆಗ್ರಹಿಸಿದರು.

ಮಂಗಳೂರಿನ ಎಸ್ ಡಿಪಿಐ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಂದು ಚುನಾವಣೆ ಬಂದಾಗ ಮುಸ್ಲಿಮರ ಹೆಣ ಬೇಕು ಎಂಬ ರೀತಿಯಲ್ಲಿ ಸಂಘ ಪರಿವಾರದ ಕೆಲವು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪಗಳಿಗೆ ಹಿಂದಿನ ಹಲವು ಘಟನೆಗಳು ಸಾಕ್ಷಿಯಾಗಿವೆ” ಎಂದು ಆರೋಪಿಸಿದರು.

ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಆರೋಪಿಗಳ ಬಂಧನ ಸಾಧ್ಯವಾಗಿದೆ. ಆದರೆ, ಇಷ್ಟು ಗಂಭೀರ ಘಟನೆ ನಡೆದಿದ್ದರೂ ಪ್ರಕರಣದ ಕುರಿತು ನಡೆಯಬೇಕಾದಷ್ಟು ಸಾರ್ವಜನಿಕ ಹಾಗೂ ಮಾಧ್ಯಮ ಚರ್ಚೆ ನಡೆಯುತ್ತಿಲ್ಲ. ಆರೋಪಿಗಳ ಧರ್ಮ, ರಾಜಕೀಯ ಸಂಪರ್ಕ ಅಥವಾ ಪ್ರಭಾವವನ್ನು ಆಧರಿಸಿ ಪ್ರಕರಣವನ್ನು ವೈಭವೀಕರಿಸುವ ಅಥವಾ ಮೃದುಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಅವರು ಹೇಳಿದರು.

“ಕೊಲೆಗೆ ₹24 ಲಕ್ಷ ಹಣಕಾಸು ಒದಗಿಸಿದವರು ಯಾರು? ಹಣದ ಮೂಲ ಯಾವುದು? ಹಣಕಾಸಿನ ಜಾಲದ ಹಿಂದೆ ಯಾರಿದ್ದಾರೆ? ಈ ಬಗ್ಗೆ ತನಿಖೆ ಎಲ್ಲಿಗೆ ತಲುಪಿದೆ?” ಎಂದು ಪ್ರಶ್ನಿಸಿದ ಅವರು, ಪೊಲೀಸರು ಈ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಕೊಲೆ ಸಂಚು ಮೇ ತಿಂಗಳಿನಿಂದಲೇ ನಡೆಯುತ್ತಿತ್ತು ಎಂಬ ಆರೋಪಗಳಿದ್ದು, ಪ್ರಕರಣದಲ್ಲಿ ಬಂಧಿತರಾಗಿರುವ ಅಥವಾ ವಿಚಾರಣೆಗೆ ಒಳಪಟ್ಟಿರುವ ವ್ಯಕ್ತಿಗಳ ಸಂಪರ್ಕ ಜಾಲವನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಅಭಿಷೇಕ್, ಸುದೀಪ್, ತ್ರಿವೇಣಿ ಹೋಟೆಲ್ ಮಾಲೀಕ ಹಾಗೂ ವಾಹನ ಒದಗಿಸಿದವರು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ಪಾತ್ರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

‘ಮುಸ್ಲಿಮರ ಪ್ರಕರಣವಾಗಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು’
ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ತನಿಖೆ ಮತ್ತು ಕಾನೂನು ಕ್ರಮದ ವೇಗದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಅನ್ವರ್ ಸಾದಾತ್, “ಮುಸ್ಲಿಮರು ಆರೋಪಿಗಳಾಗಿದ್ದರೆ ಜಿಲ್ಲೆಯಲ್ಲಿ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು. ಮನೆಗಳ ಮೇಲೆ ದಾಳಿ, ಸಂಬಂಧಿಕರ ಮೇಲೆ ದಾಳಿ ಸೇರಿದಂತೆ ಹಲವು ರೀತಿಯ ಕ್ರಮಗಳು ನಡೆಯುತ್ತಿದ್ದವು ಎಂಬ ಅನುಭವ ನಮ್ಮ ಮುಂದಿದೆ” ಎಂದು ಹೇಳಿದರು.

ಈ ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ, ಆಹಾರ, ಹಣ, ವಾಹನ ಅಥವಾ ಇತರ ನೆರವು ನೀಡಿದವರ ಪಾತ್ರವನ್ನೂ ತನಿಖೆ ಮಾಡಬೇಕು. ಆರೋಪಿಗಳು ಸಿಗದಿದ್ದರೆ ಸಂಬಂಧಿಕರನ್ನೇ ಗುರಿಯಾಗಿಸುವ ರೀತಿಯ ಕ್ರಮವನ್ನು ಮುಸ್ಲಿಂ ಪ್ರಕರಣಗಳಲ್ಲಿ ಅನುಸರಿಸಲಾಗುತ್ತದೆ ಎಂಬ ಆರೋಪಗಳಿದ್ದು, ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು ಎಂದು ಅವರು ಹೇಳಿದರು.

‘ಹಣಕಾಸಿನ ಮೂಲ ಬಹಿರಂಗಪಡಿಸಿ’
ಕೊಲೆಯ ಹಿಂದೆ ದೊಡ್ಡ ಮಟ್ಟದ ಹಣಕಾಸಿನ ನೆರವು ಇದ್ದರೆ ಅದರ ಮೂಲವನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಭಾಗವಾಗಬೇಕು. ಮುಸ್ಲಿಂ ಆರೋಪಿಗಳ ವಿರುದ್ಧ ಅನ್ವಯಿಸಲಾಗುವ ಕಠಿಣ ಕಾನೂನುಗಳು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಯ ಮಾನದಂಡವನ್ನು ಈ ಪ್ರಕರಣದಲ್ಲೂ ಅನುಸರಿಸಲಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

“ಸುಳ್ಯದಿಂದ ಉಡುಪಿವರೆಗೆ ಇರುವ ಸಂಪರ್ಕ ಜಾಲದ ಬಗ್ಗೆ ತನಿಖೆ ನಡೆಯಬೇಕು. ಪ್ರಕರಣದ ಬೇರುಗಳು ಎಲ್ಲಿಯವರೆಗೆ ಹರಡಿವೆ ಎಂಬುದನ್ನು ಪತ್ತೆಹಚ್ಚಬೇಕು. ಕೇವಲ ಕೆಲವರನ್ನು ಬಂಧಿಸಿ ಪ್ರಕರಣ ಮುಗಿಸುವ ಬದಲು ಸಂಪೂರ್ಣ ಸಂಚಿನ ಜಾಲವನ್ನು ಬಯಲಿಗೆಳೆಯಬೇಕು” ಎಂದು ಅವರು ಒತ್ತಾಯಿಸಿದರು.

ಸಂಘಟನೆಗಳ ಕಚೇರಿಗಳ ಬಗ್ಗೆಯೂ ತನಿಖೆಯಾಗಲಿ
ಕೊಲೆಗೆ ಸಂಬಂಧಿಸಿದ ಸಂಚು ಯಾವುದೇ ಸಂಘಟನೆ, ಸಂಘಟನೆಯ ಕಚೇರಿ ಅಥವಾ ವ್ಯಕ್ತಿಗಳ ಗುಂಪಿನಲ್ಲಿ ನಡೆದಿದೆಯೇ ಎಂಬುದನ್ನೂ ತನಿಖೆ ಮಾಡಬೇಕು. ಆರೋಪಗಳು ಸಾಬೀತಾದಲ್ಲಿ ಕಾನೂನುಬದ್ಧವಾಗಿ ಅಂತಹ ಸ್ಥಳಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅನ್ವರ್ ಸಾದಾತ್ ಹೇಳಿದರು.