ಮಂಗಳೂರು: ಮಹಿಳಾ ಮೀಸಲಾತಿ ಮಸೂದೆಗೆ ಸೋಲು ವಿಚಾರವಾಗಿ ಮಂಗಳೂರಿನಲ್ಲಿ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಮಹಿಳೆಯರ ಹೆಸರಿನಲ್ಲಿ ವಂಚನೆ ಮಾಡಲು ಹೊರಟಿದೆ. ವಿಶೇಷ ಅಧಿವೇಶನ ಕರೆದು ಮುಖಭಂಗ ಆಗಿರೋದಕ್ಕೆ ಅವರೇ ಕಾರಣ. ಮಹಿಳೆಯರಿಗೆ ವಾಸ್ತವದಲ್ಲಿ ವಿರೋಧ ಮಾಡಿರೋದು ಬಿಜೆಪಿಯವರು. ಮಹಿಳಾ ಮೀಸಲಾತಿಗೆ ಯಾರು ವಿರೋಧ ಇಲ್ಲ. 2023ರಲ್ಲಿ ಈ ಮಸೂದೆ ತಂದಾಗ ಸರ್ವಾನುಮತದಿಂದ ನಾವು ಅದನ್ನು ಒಪ್ಪಿಕೊಂಡಿದ್ದೆವು ಎಂದರು.
ಮಹಿಳಾ ಮೀಸಲಾತಿಗೂ ಕ್ಷೇತ್ರ ಪುನರ್ ವಿಂಗಡನೆಗೂ ಸಂಬಂಧ ಇಲ್ಲ. ಮಹಿಳೆಯರಿಗೆ 33% ಮೀಸಲಾತಿ ನೀಡುವ ಬಗ್ಗೆ ತೀರ್ಮಾನ ಮಾಡಿ. ನಾವು ಸ್ವಾಗತಿಸುತ್ತೇವೆ. ರಾಜ್ಯದ 224 ಕ್ಷೇತ್ರಗಳ ಪೈಕಿ 33% ಮಹಿಳೆಯರಿಗೆ ಮೀಸಲಾತಿ ಕೊಟ್ರೆ ನಮಗೆ ಸಮಸ್ಯೆ ಇಲ್ಲ. ನಾವೆಲ್ಲರೂ ಆ ಮಸೂದೆಯ ಪರವಾಗಿ ಇದ್ದೇವೆ. ಈಗ ಕೆಲವ ಕಡೆ ಚುನಾವಣೆ ನಡೆಯುತ್ತಿದೆ ಎಂದರು.
ಈ ಮಸೂದೆ ಹಿಂದೆಯೆ ಜಾರಿಗೆ ತಂದಿದ್ರೆ ಚುನಾವಣೆಯಲ್ಲಿ 33% ಮಹಿಳೆಯರಿಗೆ ಸೀಟು ಸಿಗ್ತಿತ್ತು. ಮಹಿಳೆಯರ ಹೆಸರಿನಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಕ್ಷೇತ್ರ ಪುನರ್ ವಿಂಗಡನೆ ಮಾಡಬೇಕೆಂಬ ಹುನ್ನಾರ ಇವರದ್ದು. ದಕ್ಷಿಣಭಾರತ ರಾಜ್ಯಗಳಿಗೆ ಇದರಿಂದ ದೊಡ್ಡ ಸಮಸ್ಯೆ, ಅನೇಕ ಅನುಮಾನಗಳಿವೆ. ಮಹಿಳೆಯರ ಹೆಸರಿನಲ್ಲಿ ಅಧಿಕಾರ ಕೈಯಲ್ಲಿ ಹಿಡಿಯಬೇಕೆಂದು ಮಾಡಿದ ಪ್ರಯತ್ನ ಈಗ ವಿಫಲವಾಗಿದೆ. ಇದೊಂದು ಮೋದಿ ಮತ್ತು ಬಿಜೆಪಿಯವರ ಸಂಚು ಎಂದರು.

