ಮಂಗಳೂರು : ಡ್ರಗ್ಸ್ ಮುಕ್ತ ಮಂಗಳೂರು ಹಿನ್ನಲೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. 150 ಕಾಲೇಜುಗಳ 8,310 ವಿದ್ಯಾರ್ಥಿಗಳನ್ನು ಮಾದಕವಸ್ತು ಬಳಕೆ ಕುರಿತು ಪರೀಕ್ಷೆಗೆ ಒಳಪಡಿಸಲಾಗಿದೆ.
ಈ ಪೈಕಿ 98 ವಿದ್ಯಾರ್ಥಿಗಳಲ್ಲಿ ಮಾದಕವಸ್ತು ಬಳಕೆ ಪಾಸಿಟಿವ್ ಎಂದು ವರದಿಯಾಗಿದ್ದು, ಕಾಲೇಜು ಆಡಳಿತ ಮತ್ತು ಪೋಷಕರ ಮೂಲಕ ಅವರಿಗೆ ಕೌನ್ಸೆಲಿಂಗ್ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ಪರಿಶೀಲನೆಗಾಗಿ ನಿನ್ನೆ ವಿಶೇಷ ಅಭಿಯಾನ ನಡೆಸಲಾಗಿದ್ದು, ಮೊದಲ ಹಂತದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದ 50 ವಿದ್ಯಾರ್ಥಿಗಳನ್ನು ಮರುಪರೀಕ್ಷೆಗೆ ಒಳಪಡಿಸಲಾಯಿತು.
ಮರುಪರೀಕ್ಷೆಯಲ್ಲಿ 38 ವಿದ್ಯಾರ್ಥಿಗಳ ಫಲಿತಾಂಶ ನೆಗೆಟಿವ್ ಬಂದಿದ್ದು, ತಾವು ಮಾದಕವಸ್ತು ಬಳಕೆಯನ್ನು ನಿಲ್ಲಿಸಿರುವುದಾಗಿ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಪಾಸಿಟಿವ್ ಬಂದಿದ್ದ ವಿದ್ಯಾರ್ಥಿಗಳಲ್ಲಿ ಶೇ.75ಕ್ಕೂ ಹೆಚ್ಚು ಮಂದಿ ಇದೀಗ ನೆಗೆಟಿವ್ ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇನ್ನು ಮರುಪರೀಕ್ಷೆಯಲ್ಲೂ ಪಾಸಿಟಿವ್ ಬಂದಿರುವ 12 ವಿದ್ಯಾರ್ಥಿಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಗಳು ನಿಕಟವಾಗಿ ಮುಂದುವರಿಸಿ, ಅವರ ಮೇಲೆ ನಿರಂತರ ನಿಗಾ ವಹಿಸುವಂತೆ ಸೂಚಿಸಲಾಗಿದೆ.

