ಉಡುಪಿ: ಲೋಹ ಮಿಶ್ರಿತ ಹಾಗೂ ರಾಸಾಯನಿಕ ಬಣ್ಣ ಬಳಸಿ ತಯಾರಿಸಿದ ಗಣಪತಿ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ಜಲಚರಗಳಿಗೆ ಅಪಾಯ ಉಂಟಾಗುವುದರ ಜತೆಗೆ ಮಾನವನ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಿ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಬರಬಹುದು ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್ ಎಚ್ಚರಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ‘ಸನ್ಮತಿ’ ಮಾಸಿಕ ಸಂಚಿಕೆ ಬಿಡುಗಡೆ ಹಾಗೂ ‘ತಿಂಗಳ ಅಂಗಳ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೈಕೋರ್ಟ್ ಹಾಗೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪತಿ ವಿಗ್ರಹಗಳ ತಯಾರಿ, ಮಾರಾಟ ಹಾಗೂ ವಿಸರ್ಜನೆಯನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಆವೆ ಮಣ್ಣಿನಿಂದ ವಿಗ್ರಹ ತಯಾರಿಕೆಗೆ ಉತ್ತೇಜನ ನೀಡಬೇಕು. ವಿಗ್ರಹ ವಿಸರ್ಜಿಸುವ ಮುನ್ನ ಹೂವು, ಅಲಂಕಾರ ಸಾಮಗ್ರಿಗಳನ್ನು ಪ್ರತ್ಯೇಕಿಸಬೇಕು ಎಂದರು.
ಹರಿಯುವ ನೀರಿನ ಬದಲು ಬಕೆಟ್, ತೊಟ್ಟಿ ಅಥವಾ ಟ್ಯಾಂಕ್ಗಳಲ್ಲಿ ವಿಗ್ರಹ ವಿಸರ್ಜಿಸುವುದು ಸೂಕ್ತ. ಕೆಲ ಸ್ಥಳೀಯ ಸಂಸ್ಥೆಗಳು ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡುತ್ತಿವೆ. ಅರಿಶಿನ, ಕಾಗದ, ಎಲೆ ಹಾಗೂ ವಿವಿಧ ಹಿಟ್ಟುಗಳಿಂದ ತಯಾರಿಸಿದ ವಿಗ್ರಹಗಳ ವಿಸರ್ಜನೆ ಪರಿಸರ ಸ್ನೇಹಿಯಾಗಿದೆ ಎಂದು ತಿಳಿಸಿದರು.
ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ. ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಉಲ್ಲಂಘಿಸಿದರೆ ಜಪ್ತಿ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 409 ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ:
ಸೆನ್ ಅಪರಾಧ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುದರ್ಶನ್ ದೊಡಮನಿ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ 409 ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ನೀಡಲಾಗಿದೆ. ಬಂದೋಬಸ್ತ್ಗಾಗಿ 163 ಹೋಮ್ ಗಾರ್ಡ್ಸ್ ಸಹಿತ 804 ಪೊಲೀಸರನ್ನು ಮೂರು ಉಪವಿಭಾಗಗಳಲ್ಲಿ ನಿಯೋಜಿಸಲಾಗಿದೆ ಎಂದರು.
ಗಣೇಶೋತ್ಸವದ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಅನುಮತಿ ಇಲ್ಲ. ಸೆ.14ರಿಂದ ಅ.14ರವರೆಗೆ ವಿಸರ್ಜನೆ ನಡೆಯಲಿದೆ. ಸಾರ್ವಜನಿಕರಿಗೆ ತೊಂದರೆಯಾದಲ್ಲಿ 112ಕ್ಕೆ ಕರೆ ಮಾಡುವಂತೆ ತಿಳಿಸಿದರು.

