ಮಂಗಳೂರು : ಅಡುಗೆ ಅನಿಲ ಬೆಲೆ ಏರಿಕೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯವನ್ನು ಖಂಡಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ನಗರದ ಕದ್ರಿ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಖಾಲಿ ಗ್ಯಾಸ್ ಸಿಲಿಂಡರ್‌ಗೆ ಹೂಮಾಲೆ ಹಾಕಿ ಅದನ್ನು ಚಟ್ಟದ ಮೇಲೆ ಕಟ್ಟಿ ಕಾಂಗ್ರೆಸ್‌ ಕಾರ್ಯ ಕರ್ತರು ಹೊತ್ತುಕೊಂಡು ಕದ್ರಿ ಸರ್ಕಲ್ ಬಳಿ ಅಣಕು ಶವಯಾತ್ರೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ಗ್ಯಾಸ್ ಸ್ಟ್ ಮತ್ತು ಖಾಲಿ ಪಾತ್ರೆಯನ್ನೂ ಪ್ರತಿಭಟನಾಕಾರರು ಪ್ರದರ್ಶಿಸಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಕೇಂದ್ರ ಸರಕಾರದ ವೈಫಲ್ಯದಿಂದ ದೇಶದಲ್ಲಿ ಅಡುಗೆ ಅನಿಲ ಸರಿಯಾಗಿ ಪೂರೈಕೆಯಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾ ಗುತ್ತಿದೆ. ಕೇಂದ್ರ ಸರಕರದ ಅಸ್ಪಷ್ಟ ವಿದೇಶಾಂಗ ನೀತಿಯೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

ದೇಶದ ಆರ್ಥಿಕ ಪ್ರಸಕ್ತ ಪರಿಸ್ಥಿತಿ ಚೆನ್ನಾಗಿಲ್ಲ. ಬೆಲೆ ಏರಿಕೆಯಿಂದ ಜನರು ಕೂಡ ಕಂಗಾಲಾಗಿದ್ದಾರೆ. ಆದರೂ ಕೂಡ ಬಿಜೆಪಿಗರು ಸುಳ್ಳು ಹೇಳುತ್ತಾ ಜನರನ್ನು ತಪ್ಪು ದಾರಿಗೆ ತಳ್ಳುತಿದ್ದಾರೆ. ಹಾಗಾಗಿ ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ನಿರಂತರ ಬೆಲೆ ಏರಿಕೆಯಾಗುತ್ತಿದ್ದರೂ ಕೂಡ ಪ್ರಧಾನಿ ಸುಳ್ಳುಗಳನ್ನು ಹೇಳುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದು ರಮಾನಾಥ ರೈ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಮಾತನಾಡಿ ಅಡುಗೆ ಅನಿಲದ ಬೆಲೆಯು ಕಾಳಸಂತೆಯಲ್ಲಿ ನಾಲೈದು ಸಾವಿರ ರೂ.ಗೆ ಏರಿಕೆಯಾಗಿದೆ. ಪರಿಣಾಮ ಹೊಟೇಲ್‌ಗಳಲ್ಲಿ ತಿಂಡಿ ತಿನಿಸು, ಊಟದ ದರದಲ್ಲೂ ವಿಪರೀತ ಏರಿಕೆಯಾಗಿದೆ. ಆಟೊ ರಿಕ್ಷಾಗಳಿಗೆ ಎಲ್‌ಪಿಜಿ ಸಿಗದೆ ಚಾಲಕರು ಪರದಾಡುವಂತಾಗಿದೆ. ಇದಕ್ಕೆ ಬಿಜೆಪಿ, ಕೇಂದ್ರ ಸರಕಾರವೇ ಕಾರಣವಾಗಿದೆ. ನರೇಂದ್ರ ಮೋದಿ ದೇಶದ ಅತ್ಯಂತ ದುರ್ಬಲ ಪ್ರಧಾನಿ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಆರೋಪಿಸಿದರು.

View this post on Instagram

A post shared by News Karnataka (@newskarnataka)