ಮಂಗಳೂರು : ಗೋಡ್ಸೆಗಿಂತ ಹೆಚ್ಚಾಗಿ ಗಾಂಧಿಯನ್ನು ಕೊಂದವರು ಕಾಂಗ್ರೆಸ್‌ನವರೇ ಎಂದು ಮಾಜಿ ಸಂಸದ ಹಾಗೂ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಕೇಂದ್ರ ಸರ್ಕಾರದ ಬಜೆಟ್, ವಿಬಿಜಿ-ರಾಂ ಯೋಜನೆಯ ಹೆಸರು ಬದಲಾವಣೆ, ರಾಜ್ಯ-ಕೇಂದ್ರ ಅನುದಾನ, ಗಾಂಧೀಜಿಯ ಪರಿಕಲ್ಪನೆ ಹಾಗೂ ರಾಜ್ಯ ಸರ್ಕಾರದ ಆಡಳಿತ ಕುರಿತಂತೆ ತೀಕ್ಷ ಪ್ರತಿಕ್ರಿಯೆ ನೀಡಿದರು.

ವಿಬಿಜಿ-ರಾಂ (ವೈಬ್ರಂಟ್ ವಿಲೇಜ್-ರಾಮ) ಹೆಸರು ಬದಲಾವಣೆ ಕುರಿತು ಪ್ರಶ್ನೆಗೆ ಉತ್ತರಿಸಿದ ಕಟೀಲ್, ಈ ಹಿಂದೆ ಮನ್‌ರೇಗಾ ಯೋಜನೆಯಲ್ಲಿ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ಸುಮಾರು 27 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿತ್ತು ಎಂದು ಆರೋಪಿಸಿದರು, ಹಣ ಪೋಲಾಗುವುದನ್ನು ತಡೆಯುವ ಉದ್ದೇಶದಿಂದಲೇ ಯೋಜನೆಯಲ್ಲಿ ಪರಿವರ್ತನೆ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದು ‘ವಿರೋಧಕ್ಕೋಸ್ಕರ ವಿರೋಧ’ ಎಂದು ಟೀಕಿಸಿದರು. ಕಾಂಗ್ರೆಸ್‌ಗೆ ಹಣ ಪೋಲಾಗಬೇಕು ಎಂಬ ಆಸೆಯೇ ಎಂದು ಪ್ರಶ್ನಿಸಿದರು.

ಮಹಾತ್ಮ ಗಾಂಧೀಜಿ ಕುರಿತು ಮಾತನಾಡಿದ ಕಟೀಲ್, ಗಾಂಧೀಜಿ ಜೀವಂತವಾಗಿದ್ದಾಗಲೂ ಹಾಗೂ ಅವರ ಅಂತಿಮ ಕ್ಷಣಗಳಲ್ಲಿಯೂ ‘ರಾಮ’ ಎಂಬ ಶಬ್ದವನ್ನು ಉಚ್ಚರಿಸುತ್ತಿದ್ದರು. ಗಾಂಧೀಜಿಯ ಕನಸಾಗಿದ್ದದ್ದು ರಾಮರಾಜ್ಯ ಹಾಗೂ ಗ್ರಾಮ ಸ್ವರಾಜ್ಯ. ‘ನನ್ನ ಉಸಿರು-ಜೀವ-ಆತ್ಮ ಎಲ್ಲವೂ ರಾಮ’ ಎಂದು ಗಾಂಧೀಜಿ ಹೇಳುತ್ತಿದ್ದರೆಂದು ಉಲ್ಲೇಖಿಸಿದರು. ಗಾಂಧೀಜಿಗೆ ಪ್ರಿಯವಾಗಿದ್ದ ರಾಮನ ಹೆಸರನ್ನು ಸರ್ಕಾರ ಈ ಯೋಜನೆಗೆ ನೀಡಿದೆ ಎಂದು ಸಮರ್ಥಿಸಿದರು.

ಕಾಂಗ್ರೆಸ್ ಮೇಲೆ ಕಟೀಲ್ ತೀವ್ರ ವಾಗ್ದಾಳಿ ನಡೆಸಿ, ಗೋಡ್ಲೆಗಿಂತ ಹೆಚ್ಚಾಗಿ ಗಾಂಧಿಯನ್ನು ಕೊಂದವರು ಕಾಂಗ್ರೆಸ್‌ನವರೇ ಎಂದು ಹೇಳಿದರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜಾತ್ಯತೀತತೆಯ ಬದಲಾಗಿ ಗಾಂಧೀಜಿ ರಾಮರಾಜ್ಯ ಮತ್ತು ವ್ಯಸನಮುಕ್ತ ಭಾರತದ ಪರಿಕಲ್ಪನೆಯನ್ನು ಮುಂದಿಟ್ಟಿದ್ದರು. ಆದರೆ ಕಾಂಗ್ರೆಸ್ ಬ್ರಿಟಿಷರ ಆಡಳಿತ ಶೈಲಿಯಂತೆ ಜಾತಿ ಆಧಾರಿತ ರಾಜಕಾರಣ ಮಾಡುವ ಮೂಲಕ ನಿರಂತರವಾಗಿ ಗಾಂಧೀಯ ವಿಚಾರಧಾರೆಯನ್ನು ಹತ್ಯೆ ಮಾಡುತ್ತಿದೆ ಎಂದು ಆರೋಪಿಸಿದರು. ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸನ್ನು ಕಾರ್ಯರೂಪಕ್ಕೆ ತಂದವರು ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು.