ಮಂಜೇಶ್ವರ: ಆಸ್ತಿ ವಿಚಾರದಲ್ಲಿ ಸೋದರ ಸಂಬಂಧಿಯ ಜೊತೆಗೆ ಜಗಳ ಕಾದ ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಕೊಲೆಗೈದ ಘಟನೆ ಕರ್ನಾಟಕ ಗಡಿಭಾಗ ತಲಪಾಡಿ ಬಳಿಯ ತುಮ್ಮಿನಾಡಿನಲ್ಲಿ ನಡೆದಿದೆ. ಇಬ್ಬರ ಜಗಳ ಬಿಡಿಸಲು ಹೋದ 16 ವರ್ಷದ ಮಗಳು ದುರಂತ ಬಲಿಯಾಗಿದ್ದಾಳೆ.
ಮಂಜೇಶ್ವರದ ತುಮ್ಮಿನಾಡು ನಿವಾಸಿ, ಪ್ಲಸ್ ಒನ್ ವಿದ್ಯಾರ್ಥಿನಿ ಜಮೀಲಾ(16) ಮೃತಪಟ್ಟ ದುರ್ದೈವಿ. ಉಮರ್ ಪಾಷ ಕೊಲೆಗೈದ ವ್ಯಕ್ತಿಯಾಗಿದ್ದು ಮಂಜೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಮರ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಪತ್ನಿಯ ಸೋದರಿಯ ಮನೆಯಲ್ಲಿ ವಾಸವಿದ್ದ. ಸೋಮವಾರ ಸಂಜೆ 5:30ರ ಹೊತ್ತಿಗೆ, ಉಮರ್ ಮತ್ತು ಆತನ ಬಾವ (ಪತ್ನಿಯ ಸೋದರಿಯ ಪತಿ) ಶೇಕುಂಞ ಎಂಬವರ ನಡುವೆ ಆಸ್ತಿ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಉಮರ್ ಹರಿತ ಆಯುಧದಿಂದ ಶೇಖುಞ್ಞಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ತನ್ನ ಮಾವನನ್ನು ರಕ್ಷಿಸಲು ಜಮೀಲಾ ಮಧ್ಯ ಪ್ರವೇಶಿಸಿದ್ದಾಳೆ. ಆದರೆ ಉಮರ್ ಕೈಯಲ್ಲಿದ್ದ ಹರಿತ ಆಯುಧದ ಪೆಟ್ಟು ಜುಮೀಲಾ ಕುತ್ತಿಗೆಯ ಭಾಗಕ್ಕೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಶೇಖುಂಜ್ ಅವರಿಗೂ ಗಾಯಗಳಾಗಿವೆ.
ಮೃತ ಜಮೀಲಾ ಉಮರ್ ದಂಪತಿಯ ಏಕೈಕ ಪುತ್ರಿಯಾಗಿದ್ದಳು. ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಉಮರ್, ಇತ್ತೀಚೆಗೆ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಎನ್ನಲಾಗಿದೆ. ಮಾದಕ ವಸ್ತುವಿನ ಅಮಲಿನಲ್ಲಿ ಕ್ರೂರ ಕೃತ್ಯ ನಡೆಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದು ಆರೋಪಿ ಉಮರ್‌ನನ್ನು ವಶಕ್ಕೆ ಪಡೆದಿದ್ದಾರೆ.

