ನಂಜನಗೂಡು: ಸಾಮಾನ್ಯವಾಗಿ ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ಯಾರ ದೃಷ್ಟಿಯೂ ತಾಕಬಾರದು ಎಂದು ರೈತರು ದೃಷ್ಟಿ ಬೊಂಬೆಗಳನ್ನು ಹಾಕುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ರೈತ ತನ್ನ ಬಾಳೆ ಬೆಳೆಗೆ ದೃಷ್ಟಿ ತಾಕದಿರಲಿ ಎಂದು ಸ್ಯಾಂಡಲ್ವುಡ್ ನಟಿಯರ ಫೋಟೋಗಳನ್ನೇ ಅಳವಡಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ರೈತನೊಬ್ಬ ತನ್ನ ಜಮೀನಿನ ಮುಂಭಾಗದ ತಂತಿ ಬೇಲಿಗೆ ನಟಿಯರಾದ ರಾಧಿಕಾ, ರಚಿತಾ ರಾಮ್, ಸ್ನೇಹ ಸೇರಿದಂತೆ ‘ಮಲ್ಲ’ ಚಿತ್ರದ ನಟ ರವಿಚಂದ್ರನ್ ಹಾಗೂ ನಟಿ ಪ್ರಿಯಾಂಕ ಅವರ ಫ್ಲೆಕ್ಸ್ಗಳನ್ನು ಅಳವಡಿಸಿದ್ದಾನೆ. ಮಡಹಳ್ಳಿ ಮತ್ತು ತಗಡೂರು ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ರಸ್ತೆಯ ಪಕ್ಕದಲ್ಲೇ ಈ ಜಮೀನಿದ್ದು, ರಸ್ತೆಯಲ್ಲಿ ಸಂಚರಿಸುವ ಜನರ ದೃಷ್ಟಿ ಬಾಳೆ ಬೆಳೆಯ ಮೇಲೆ ಬೀಳಬಾರದು ಎಂಬ ಉದ್ದೇಶದಿಂದ ರೈತ ಈ ವಿನೂತನ ಉಪಾಯ ಮಾಡಿದ್ದಾನೆ ಎನ್ನಲಾಗಿದೆ.
ಆದರೆ, ರೈತನ ಈ ವಿಭಿನ್ನ ಪ್ರಯೋಗ ಇದೀಗ ದಾರಿಹೋಕರಿಗೆ ಕುತೂಹಲದ ಕೇಂದ್ರವಾಗಿದೆ. ಜಮೀನಿನಲ್ಲಿರುವ ಬಾಳೆ ಗಿಡಗಳನ್ನು ನೋಡುವ ಬದಲು ನಟಿಯರ ಫ್ಲೆಕ್ಸ್ಗಳನ್ನು ನೋಡುತ್ತಾ ಜನರು ಮುಂದೆ ಸಾಗುತ್ತಿದ್ದಾರೆ. ಒಟ್ಟಿನಲ್ಲಿ ದೃಷ್ಟಿ ತಡೆಯಲು ರೈತ ಮಾಡಿದ ಈ ವಿಭಿನ್ನ ಐಡಿಯಾ ಇದೀಗ ತಗಡೂರು ಭಾಗದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

