ಉಳ್ಳಾಲ: ರಸ್ತೆ ದಾಟುತ್ತಿದ್ದ ಪಾದಚಾರಿಯೋರ್ವರಿಗೆ ಅಪರಿಮಿತ ವೇಗದಲ್ಲಿ ಧಾವಿಸುತ್ತಿದ್ದ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ತೊಕ್ಕೊಟ್ಟು ರಿಕ್ಷಾ ಪಾರ್ಕ್ ಬಳಿ ನಡೆದಿದೆ.
ಘಟನೆಯಿಂದ ಪಾದಚಾರಿ ಕಾಪಿಕಾಡು ನಿವಾಸಿ ಪಂಚಮ್ ಕೇಟರರರ್ಸ್ ಮಾಲಕರಾದ ಚಂದ್ರಶೇಖರ್(62) ಎಂಬವರು ಗಂಭೀರ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಂದ್ರಶೇಖರ್ ಅವರು ತೊಕ್ಕೊಟ್ಟುವಿನ ನಂದಿನಿ ಪಾರ್ಲರಲ್ಲಿ ಹಾಲನ್ನ ಖರೀದಿಸಿ ರಸ್ತೆ ದಾಟುತ್ತಿದ್ದ ವೇಳೆ ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಗೆ ಅತಿ ವೇಗದಲ್ಲಿ ಧಾವಿಸುತ್ತಿದ್ದ ಆಟೋ ರಿಕ್ಷಾ ಢಿಕ್ಕಿ ಹೊಡೆದು ಉರುಳಿ ಬಿದ್ದಿದೆ.
ಢಿಕ್ಕಿಯ ರಭಸಕ್ಕೆ ಚಂದ್ರ ಅವರ ಹಣೆಯ ಭಾಗಕ್ಕೆ ತೀವ್ರ ಏಟು ತಗುಲಿದೆ. ರಿಕ್ಷಾ ಚಾಲಕ ಪ್ರಶಾಂತ್ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

