ದಿನಕ್ಕೆ 15 ನಿಮಿಷ ಬರಿಗಾಲಿನಲ್ಲಿ ನಡೆಯುವುದರಿಂದ ದೇಹ ಮತ್ತು ಮನಸ್ಸಿಗೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ.

ನಮ್ಮ ಪಾದಗಳಲ್ಲಿ ಸಾವಿರಾರು ನರಗಳ ತುದಿಗಳಿರುತ್ತವೆ. ನಾವು ಬರಿಗಾಲಿನಲ್ಲಿ ನೆಲ, ಹಸಿರು ಹುಲ್ಲು ಅಥವಾ ಮಣ್ಣಿನ ಮೇಲೆ ನಡೆದಾಗ ಆ ನರಗಳು ಜಾಗೃತಗೊಂಡು ಇಡೀ ದೇಹದ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ಅದ್ಯಯನ ವರದಿಗಳು ತಿಳಿಸಿವೆ.

ಭೂಮಿಯೊಂದಿಗೆ ನೇರ ಸಂಪರ್ಕ ಹೊಂದುವ ಈ ಪ್ರಕ್ರಿಯೆಯನ್ನು ‘ಅರ್ಥಿಂಗ್’ ಅಥವಾ ‘ಗ್ರೌಂಡಿಂಗ್’ ಎಂದು ಕರೆಯಲಾಗುತ್ತದೆ. ಪ್ರತಿದಿನ ಕೇವಲ 15 ನಿಮಿಷ ಬರಿಗಾಲಿನಲ್ಲಿ ನಡೆಯುವುದರಿಂದ ಹೃದಯದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಸಿಗುತ್ತವೆ.

ರಕ್ತ ಪರಿಚಲನೆ ಸುಧಾರಣೆ: ಬರಿಗಾಲಿನಲ್ಲಿ ನಡೆದಾಗ ಪಾದಗಳಲ್ಲಿರುವ ಸಹಸ್ರಾರು ನರಗಳು ಉತ್ತೇಜನಗೊಳ್ಳುತ್ತವೆ. ಇದು ರಕ್ತನಾಳಗಳಲ್ಲಿ ರಕ್ತವು ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ.

ರಕ್ತ ಹೆಪ್ಪುಗಟ್ಟುವಿಕೆ ತಡೆಗಟ್ಟುವಿಕೆ: ಭೂಮಿಯ ಸಂಪರ್ಕದಿಂದ ಕೆಂಪು ರಕ್ತಕಣಗಳ ವಿದ್ಯುತ್ ಚಾರ್ಜ್ ಸಮತೋಲನಕ್ಕೆ ಬರುತ್ತದೆ. ಇದರಿಂದ ರಕ್ತವು ಗಟ್ಟಿಯಾಗುವುದು ತಪ್ಪುತ್ತದೆ ಮತ್ತು ಹೃದಯಾಘಾತ ಹಾಗೂ ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ.

ದೇಹದ ಉರಿಯೂತ ಇಳಿಕೆ: ಭೂಮಿಯಿಂದ ಹೀರಿಕೊಳ್ಳುವ ನೈಸರ್ಗಿಕ ಎಲೆಕ್ಟ್ರಾನ್‌ಗಳು ದೇಹದಲ್ಲಿರುವ ಫ್ರೀ ರಾಡಿಕಲ್ಸ್‌ಗಳನ್ನು ನಾಶಪಡಿಸಿ, ಹೃದಯಕ್ಕೆ ಹಾನಿ ಮಾಡುವ ಉರಿಯೂತವನ್ನು ಕಡಿಮೆ ಮಾಡುತ್ತವೆ.

ಹೃದಯ ಬಡಿತದ ಸಮತೋಲನ: ಇದು ಹೃದಯದ ಎಲೆಕ್ಟ್ರಿಕಲ್ ವ್ಯವಸ್ಥೆಯನ್ನು ಸರಿಪಡಿಸಿ, ಹೃದಯ ಬಡಿತದ ಏರುಪೇರನ್ನು ನಿಯಂತ್ರಣದಲ್ಲಿಡುತ್ತದೆ.

ಒತ್ತಡ ಮತ್ತು ರಕ್ತದೊತ್ತಡ ನಿಯಂತ್ರಣ: ಹಸಿರು ಹುಲ್ಲು ಅಥವಾ ನೆಲದ ಮೇಲೆ ಬರಿಗಾಲಿನಲ್ಲಿ ನಡೆದಾಗ ದೇಹದಲ್ಲಿ ‘ಕಾರ್ಟಿಸೋಲ್’ ಎಂಬ ಒತ್ತಡದ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಮನಸ್ಸು ಶಾಂತವಾಗಿ, ರಕ್ತದೊತ್ತಡ ಹದ್ದುಬಸ್ತಿನಲ್ಲಿರುತ್ತದೆ.