ಮಂಗಳೂರು : ಕರ್ನಾಟಕದ ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಮಹತ್ವದ ಸಿಹಿಸುದ್ದಿ. ಯಶವಂತಪುರ–ಮಡಗಾಂವ್ ನಡುವೆ ಮಂಗಳೂರು ಜಂಕ್ಷನ್ ಮಾರ್ಗವಾಗಿ ಸಂಚರಿಸುವ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ರೈಲ್ವೇ ಸಚಿವಾಲಯ ಅನುಮೋದನೆ ನೀಡಿದೆ. ಈ ಹೊಸ ರೈಲು ಸೇವೆಯಿಂದ ಬೆಂಗಳೂರು, ಕರಾವಳಿ ಕರ್ನಾಟಕ ಹಾಗೂ ಗೋವಾ ನಡುವಿನ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ರೈಲ್ವೇ ಸಚಿವಾಲಯದ ಆದೇಶದ ಪ್ರಕಾರ, 26655/26656 ಸಂಖ್ಯೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದೆ. ಯಶವಂತಪುರದಿಂದ ಹೊರಡುವ ರೈಲು ಬುಧವಾರ ಸಂಚರಿಸುವುದಿಲ್ಲ. ಮಡಗಾಂವ್‌ನಿಂದ ಹೊರಡುವ ರೈಲು ಗುರುವಾರ ವಾರದ ರಜೆ ಹೊಂದಿರಲಿದೆ.

ಹೊಸ ವಂದೇ ಭಾರತ್ ರೈಲು ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ತೋಕೂರು, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್, ಕಾರವಾರ ಹಾಗೂ ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಹೊಸ ರೈಲು ಸೇವೆ ಆರಂಭಿಸುವ ಹಿನ್ನೆಲೆಯಲ್ಲಿ 20645/20646 ಸಂಖ್ಯೆಯ ಮಡಗಾಂವ್–ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಸ್ಥಗಿತಗೊಳಿಸಲು ರೈಲ್ವೇ ಸಚಿವಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಹೊಸ ರೈಲು ಸೇವೆಯನ್ನು ಅನುಕೂಲಕರ ದಿನಾಂಕದಿಂದ ಆರಂಭಿಸಲು ಸಂಬಂಧಪಟ್ಟ ರೈಲ್ವೇ ವಲಯಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ಉದ್ಘಾಟನಾ ರೈಲನ್ನು ವಿಶೇಷ ಸೇವೆಯಾಗಿ ಓಡಿಸಿ, ನಂತರ ನಿಯಮಿತ ವೇಳಾಪಟ್ಟಿಯಲ್ಲಿ ಸೇರಿಸಿಕೊಳ್ಳುವಂತೆಯೂ ಆದೇಶಿಸಲಾಗಿದೆ.

ಹೊಸ ವಂದೇ ಭಾರತ್ ರೈಲು ಸೇವೆಯಿಂದ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಗೋವಾ ಭಾಗದ ಪ್ರಯಾಣಿಕರಿಗೆ ವೇಗದ ಮತ್ತು ಆರಾಮದಾಯಕ ರೈಲು ಸಂಪರ್ಕ ದೊರೆಯಲಿದೆ.