ಮಂಗಳೂರು: ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಕ್ಯಾಂಪಸ್ನ ‘ಯೆಂಡ್ಯೂರೆನ್ಸ್ ಝೋನ್’ ಸಭಾಂಗಣದಲ್ಲಿ ಯೆನೆಪೋಯ ನರ್ಸಿಂಗ್ ಕಾಲೇಜಿನ 21 ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭವು ಅಕ್ಟೋಬರ್ 31 2026 ರಂದು ನೆರವೇರಿತು.

ಒಡಿಶಾದ ಭುವನೇಶ್ವರ AIIMS ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರಾದ ಡಾ. ಆಶಾ ಪಿ. ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪದವೀಧರರನ್ನು ಉದ್ದೇಶಿಸಿ ಪ್ರೇರಣಾದಾಯಿಕ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ, “ನರ್ಸಿಂಗ್ ವೃತ್ತಿಯು ಕೇವಲ ಒಂದು ಕೆಲಸವಲ್ಲ, ಅದು ಕರುಣೆ, ಧೈರ್ಯ ಮತ್ತು ಮಾನವೀಯತೆಗೆ ಬದ್ಧವಾದ ಜೀವಮಾನದ ಸೇವೆಯಾಗಿದೆ” ಎಂದು ಹೇಳಿದರು.
ಕುಶಲ ಹಾಗೂ ನೈತಿಕ ಮೌಲ್ಯವುಳ್ಳ ಶುಶ್ರೂಷಕರ ಅಗತ್ಯತೆಯನ್ನು ಎತ್ತಿಹಿಡಿದ ಅವರು, “ರೋಗಿಗಳ ಆರೈಕೆಯಲ್ಲಿ ನರ್ಸ್ನ ಸಾಂತ್ವನದ ಉಪಸ್ಥಿತಿ ಮತ್ತು ಆಲಿಸುವ ಗುಣವು ವೈದ್ಯಕೀಯ ಚಿಕಿತ್ಸೆಗಿಂತಲೂ ಮಿಗಿಲಾದುದು” ಎಂದು ತಿಳಿಸಿದರು.
ಸಂದೇಹ ಬಂದಾಗ ಮರುಪರಿಶೀಲಿಸುವ ಹಾಗೂ ತಪ್ಪಿದ್ದಲ್ಲಿ ಧ್ವನಿ ಎತ್ತುವ ಮೂಲಕ ರೋಗಿಗಳ ಸುರಕ್ಷತೆ ಮತ್ತು ನೈತಿಕತೆಯನ್ನು ಎತ್ತಿಹಿಡಿಯಲು ಕರೆ ನೀಡಿದ ಅವರು, “ಯುವಜನರ ಜ್ಞಾನ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಾಕ್ಷ್ಯಾಧಾರಿತ ಆರೈಕೆಯ ಮೇಲೆ ರಾಷ್ಟ್ರದ ನೈಜ ಅಭಿವೃದ್ಧಿ ನಿಂತಿದೆ” ಎಂದರು. ಪ್ರತಿಯೊಬ್ಬ ಪದವೀಧರರು ಇಡೀ ಜಗತ್ತನ್ನೇ ಒಮ್ಮೆಲೆ ಬದಲಾಯಿಸಲು ಸಾಧ್ಯವಾಗದಿದ್ದರೂ, ತಮ್ಮ ಆರೈಕೆ ಮತ್ತು ಗೌರವಯುತ ಸೇವೆಯಿಂದ ಸ್ಪರ್ಶಿಸುವ ಪ್ರತಿಯೊಂದು ಜೀವವೂ ಈ ಜಗತ್ತನ್ನು ಮತ್ತಷ್ಟು ಸುಂದರವಾಗಿಸುತ್ತದೆ ಎಂದು ಅವರು ತಿಳಿಸಿದರು.
ಕಾಲೇಜಿನ ಡೀನ್ ಹಾಗೂ ಪ್ರಾಂಶುಪಾಲರಾದ ಡಾ. ಲೀನಾ ಕೆ.ಸಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಮಾರಂಭದಲ್ಲಿ 109 ಬಿ.ಎಸ್ಸಿ, 62 ಪಿ.ಬಿ.ಬಿ.ಎಸ್ಸಿ, 17 ಎಂ.ಎಸ್ಸಿ ಹಾಗೂ 50 ಜಿ.ಎನ್.ಎಮ್ ಸೇರಿದಂತೆ ಒಟ್ಟು 238 ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕುಮಾರಿ ಮುನಾವಿರಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಉಪ ಪ್ರಾಂಶುಪಾಲರಾದ ಡಾ. ಪ್ರಿಯಾ ರೇಷ್ಮಾ ಅರಾನ್ಹಾ ಸ್ವಾಗತ ಭಾಷಣ ಮಾಡಿದರು ಹಾಗೂ ಡಾ. ಜಾನೆಟ್ ಮಿರಾಂಡ ಧನ್ಯವಾದ ಸಮರ್ಪಿಸಿದರು. ಡಾ. ಶೆರಿನ್ ಡಿಸೋಜ ಮತ್ತು ಶ್ರೀಮತಿ ರೆನಿತಾ ಪ್ರತಿಮಾ ತೌರೋ ಕಾರ್ಯಕ್ರಮವನ್ನು ನಿರೂಪಿಸಿದರು.

