ಮಂಗಳೂರು : ಆಸ್ತಿಗಾಗಿ ಮಗಳೇ ತನ್ನ ತಂದೆಯನ್ನು ಕೊಂದು ತರಾತುರಿಯಲ್ಲಿ ಅಂತ್ಯಕ್ರಿಯೆ ಮುಗಿಸಿದ್ದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇದೀಗ ಹೂತು ಹಾಕಿದ್ದ ತಂದೆಯ ಶವವನ್ನು ದೇರೆಬೈಲ್ ಚರ್ಚ್ ಆವರಣದಿಂದ ಹೊರ ತೆಗೆದು ಎಫ್‌ಎಸ್‌ಎಲ್‌ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ.

ಕಳೆದ ಜುಲೈ 19ರಂದು ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಎಂಬವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಸ್ಥಳೀಯರಿಗೆ ಅಥವಾ ಕುಟುಂಬಸ್ಥರಿಗೆ ಮಾಹಿತಿ ನೀಡದೆ ಜೊತೆಗಿದ್ದ ಮಗಳು ಮಾಯಾ ರೇಗೊ ತನ್ನ ಆಪ್ತರ ಮೂಲಕ ಶವದ ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ ಅಂತ್ಯಕ್ರಿಯೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಸಂಶಯಗೊಂಡ ಆಲ್ಬರ್ಟ್ ರೇಗೊ ಅವರ ಸ್ನೇಹಿತರಾದ ಹೆರಾಲ್ಡ್ ಪಿರೇರಾ ಅವರು ಉರ್ವಾ ಠಾಣೆಗೆ ದೂರು ನೀಡಿದ್ದು, ಮಾಯಾ ರೇಗೋ ಮತ್ತು ಇನ್ನಿತರರ ವಿರುದ್ಧ ಎಫ್‌ಐಆ‌ರ್ ದಾಖಲಾಗಿತ್ತು.

ಮಾಯಾ ರೇಗೊ ಮಾದಕ ವ್ಯಸನಿಯೆಂಬ ಆರೋಪಗಳಿದ್ದು ಹಣಕ್ಕಾಗಿ ತನ್ನ ಇತರ ಸ್ನೇಹಿತರ ಮೂಲಕ ತಂದೆಯನ್ನು ಮುಗಿಸಿದ್ದಾರೆ, ಅದಕ್ಕೂ ಮುನ್ನ ತಂದೆಯಿಂದ ಬಲವಂತವಾಗಿ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಬೋಂದೆಲ್ ನಲ್ಲಿರುವ ವೈದ್ಯರೊಬ್ಬರು ಮತ್ತು ಪೊಲೀಸ್ ಪೇದೆಯೊಬ್ಬರು ಸಹಕರಿಸಿದ್ದಾರೆಂದೂ ದೂರಿನಲ್ಲಿ ಆರೋಪಿಸಿದ್ದಾರೆ.

ಆಲ್ಬರ್ಟ್ ರೇಗೊ ಅವರು ಹಿಂದೆ ವಿದೇಶದಲ್ಲಿದ್ದು ಸಾಕಷ್ಟು ಆಸ್ತಿ ಮಾಡಿಕೊಂಡಿದ್ದರು. ಅವರ ಇನ್ನಿಬ್ಬರು ಮಕ್ಕಳು ಬೇರೆ ಬೇರೆ ಕಡೆ ನೆಲೆಸಿದ್ದಾರೆ. ಒಬ್ಬಳು ಮಗಳು ಮಾತ್ರ ಜೊತೆಗಿದ್ದು, ಆಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದನ್ನು ತನ್ನ ಸ್ನೇಹಿತರಿಗೆ ಆಲ್ಬರ್ಟ್ ಹೇಳುತ್ತಿದ್ದರು. ಅಲ್ಲದೆ, ಬಲವಂತದಿಂದ ವೀಲು ನಾಮೆ ಬರೆಸಿಕೊಂಡಿದ್ದನ್ನೂ ಹೇಳಿದ್ದರು. ತನಗೇನಾದರೂ ಆದರೆ ಆಕೆಯ ಕಿರುಕುಳವೇ ಕಾರಣ. ನಿರಂತರ ಹಲ್ಲೆಗೈದು ಕಿರುಕುಳ ನೀಡುತ್ತಿದ್ದ ಬಗ್ಗೆ ಆಲ್ಬರ್ಟ್ ಹೇಳಿಕೊಂಡಿದ್ದಾಗಿ ಹೆರಾಲ್ಡ್ ಪಿರೇರಾ ದೂರಿನಲ್ಲಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಎಫ್‌ಐಆ‌ರ್ ದಾಖಲಿಸಿದ್ದ ಪೊಲೀಸರು ಹಲವು ರೀತಿಯ ಸಾಕ್ಷ್ಯಗಳನ್ನು ಸಂಗ್ರಹಿಸಿ ಇದೀಗ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆಂದು ಹೇಳಲಾದ ಆಲ್ಬರ್ಟ್ ರೇಗೋ ಅವರ ಶವವನ್ನು ಕುಂಟಿಕಾನ ಬಳಿಯ ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಿಂದ ಅಗೆದು ಹೊರ ತೆಗೆದು ಪರೀಕ್ಷೆ ನಡೆಸಲಿದ್ದಾರೆ. ಇದಕ್ಕಾಗಿ ಎಫ್‌ಎಸ್ಎಲ್ ತಜ್ಞರು ಮತ್ತು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆರೋಪಿತ ಮಾಯಾ ರೇಗೊ ಮತ್ತು ಸ್ಥಳೀಯ ದೂರುದಾರರ ಸಮ್ಮುಖದಲ್ಲಿಯೇ ಅಸ್ಥಿಪಂಜರದ ಪರೀಕ್ಷೆ ನಡೆಯಲಿದೆ.

View this post on Instagram

A post shared by News Karnataka (@newskarnataka)