ಮಂಗಳೂರು : ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದಲ್ಲಿ ನಿಷೇಧಿತ ಮಾದಕವಸ್ತು MDMA ಯನ್ನು ಮಾರಾಟ ಮಾಡುತ್ತಿದ್ದ ಆರೋಪಿತರನ್ನು ಬಂಧಿಸಿ, ಅವರುಗಳಿಂದ ಸುಮಾರು ₹ 1 ಕೋಟಿ 58 ಲಕ್ಷದ 34 ಸಾವಿರ ಮೌಲ್ಯದ 1 ಕೆಜಿ 796.96 ಗ್ರಾಂ MDMA ಮಾದಕವಸ್ತುವನ್ನು ವಶಪಡಿಸಿಕೊಂಡಿರುತ್ತಾರೆ.

ಮಂಗಳೂರು ನಗರದಲ್ಲಿ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು MDMA ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಿನಾಂಕ 08-10-2026 ರಂದು ರಾತ್ರಿ 10-00 ಗಂಟೆಗೆ ಉಳ್ಳಾಲ ತಾಲುಕು ಕುಂಪಲದ ಡಿಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 1 ಕೆಜಿ 796.96 ಗ್ರಾಂ ಎಂಡಿಎಂಎ ಹಾಗೂ 03 ಮೊಬೈಲ್ ಫೋನ್, ಮಾದಕ ವಸ್ತು ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕು ಸ್ವೀಪ್ಟ್ ಕಾರು ಮತ್ತು ಆಟೋ ರಿಕ್ಷಾ, ಕೋರಿಯರ್ ರಟ್ಟಿನ ಬಾಕ್ಸ್, ವಾಟರ್ ಪ್ಯೂರಿಪಾಯರ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 1,63,84,000/- ಆಗಿರುತ್ತದೆ. ಈ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಆರೋಪಿಗಳಾದ ಅಬ್ದುಲ್ ಹಾಪೀಲ್ (25)ಅನೀಸಾ ಮಂಜಿಲ್ ಬೈದಲಾ ಪೋಸ್ಟ್ ಮಂಗಳ್ಪಾಡಿ, ಕಾಸರಗೋಡು ಜಿಲ್ಲೆ ಕೇರಳ ರಾಜ್ಯ. ಜಿಯಾವುಲ್ ಹಕ್ (30) # 1-12/1, ಎಂ.ಜೆ.ಎಂ.156, ಪಿ.ಬಾವ ಹೌಸ್, ಕಸಬಾ ಬೆಂಗ್ರೆ, ಕೂಳೂರು, ಮಂಗಳೂರು. ಅಲ್ತಾಫ್ (28) ಹಾಲಿ ಪ್ಲ್ಯಾಟ್ ನಂಬ್ರ: 201, ಆಯಿಷಾ ಅಪಾರ್ಟಮೆಂಟ್, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು. ಸ್ವಂತ ವಿಳಾಸ ಸಿರಿಸೀಮೆ ನರ್ಸರಿ ಹತ್ತಿರ, ಫೈಸಲ್ ನಗರ, ಬಜಾಲ್ ಗ್ರಾಮ, ಜಲ್ಲಿಗುಡ್ಡೆ ಪೋಸ್ಟ್, ಮಂಗಳೂರು.

ಆರೋಪಿ ಅಬ್ದುಲ್ ಹಾಪೀಲ್ ಎಂಬಾತನ ವಿರುದ್ದ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಮಾಡಿದ ಪ್ರಕರಣ ಮತ್ತು ಆರೋಪಿ ಜಿಯಾವುಲ್ ಹಕ್ ಎಂಬಾತನ ವಿರುದ್ದ ದುಬೈ ದೇಶದ ರಸ್-ಅಲ್- ಖೈಮಾ ಎಂಬಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ 03 ವರ್ಷಗಳ ಕಾಲ ಜೈಲ್ ಶಿಕ್ಷೆ ಅನುಭವಿಸಿ ಬಳಿಕ ಭಾರತಕ್ಕೆ ಬಂದಿರುವುದಾಗಿದೆ. ಹಾಗೂ ಆರೋಪಿ ಅಲ್ತಾಫ್ ಎಂಬಾತನ ವಿರುದ್ದ ಈ ಹಿಂದೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿ, ಅದನ್ನು ವಾಟರ್ ಪ್ಯೂರಿಫೈಯರ್ ನ ನೀರು ಸಂಗ್ರಹವಾಗುವ ಸ್ಥಳದಲ್ಲಿ MDMA ಅನ್ನು ಭದ್ರವಾಗಿ ಒಳಗೆ ಇರಿಸಿ, ಬಳಿಕ ಕೋರಿಯರ್ ಮೂಲಕ ಮಂಗಳೂರಿಗೆ ಕಳುಹಿಸಿ, ನಂತರ ಈ ಮಾದಕವಸ್ತುವನ್ನು ಕೇರಳ ರಾಜ್ಯ ಹಾಗೂ ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದು, ಪ್ರಾರಂಭದಲ್ಲಿಯೇ ಜಾಲವನ್ನು ಪತ್ತೆಹಚ್ಚುವಲ್ಲಿ ಮತ್ತು ತಡೆಗಟ್ಟುವಲ್ಲಿ ಯಶಸ್ವಿಯಾಗಿರುತ್ತಾರೆ. ಸದ್ರಿ ಮೂರು ಜನ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.