ಮಂಗಳೂರು : ಕಳೆದ ಎರಡೂವರೆ- ಮೂರು ವರ್ಷಗಳಿಂದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಕಳೆಯುವ ದುರುದ್ದೇಶಪೂರಿತ ಅಭಿಯಾನ ನಡೆಸುತ್ತಿದ್ದಾರೆ. ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ನಡೆದಂತಹ ಅಶಾಂತಿ ಮತ್ತು ‘ರೆಜೀಮ್ ಚೇಂಜ್’ ಕ್ರಾಂತಿಯನ್ನು ಭಾರತದಲ್ಲೂ ತರಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.

ಬಿಜೆಪಿ ಇವಿಎಂ ಎಂಜಿನಿಯರಿಂಗ್ ಮೂಲಕವೇ ಗೆಲ್ಲುತ್ತಿದ್ದರೆ, 2014, 2019 ಹಾಗೂ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದಾಗ ಇವಿಎಂ ದೋಷರಹಿತವಾಗಿತ್ತೇ? ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಾಗುವ ಮುನ್ನ, 2014ರಿಂದ ಈವರೆಗೆ ಕಾಂಗ್ರೆಸ್ ಸುಮಾರು 95 ಚುನಾವಣೆಗಳಲ್ಲಿ ಸೋತಿರುವುದಕ್ಕೆ ಯಾರನ್ನು ಹೊಣೆ ಮಾಡುತ್ತೀರಿ? ಇವಿಎಂ ಹ್ಯಾಕ್ ಆಗುತ್ತದೆ ಎಂದಾದರೆ, ಅದೇ ಇವಿಎಂ ಬಳಸಿ ಕರ್ನಾಟಕ, ತೆಲಂಗಾಣ ಹಾಗೂ ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದದ್ದು ಹೇಗೆ? ದೇಶದಲ್ಲಿ ಇದುವರೆಗೆ 12 ಬಾರಿ ಎಸ್‌ಐಆರ್ ನಡೆದಿದ್ದು, ಅದರಲ್ಲಿ 11 ಬಾರಿ ಕಾಂಗ್ರೆಸ್ ಆಡಳಿತದಲ್ಲೇ ನಡೆದಿದೆ.

ಅಂದಿನ ನಿಯಮಗಳೇ ಈಗಲೂ ಜಾರಿಯಲ್ಲಿದ್ದರೂ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದರು. ಸಮಾವೇಶಕ್ಕೂ ಮೊದಲು ನಗರದ ಕ್ಲಾಕ್ ಟವರ್ ನಿಂದ ಕದ್ರಿ ಮೈದಾನದವರೆಗೆ ಬೃಹತ್ ಪಾದಯಾತ್ರೆ ನಡೆಯಿತು.