News Karnataka Kannada
Thursday, May 09 2024
ಶಿವಮೊಗ್ಗ

ಶಿವಮೊಗ್ಗ: ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ

Untitled 1
Photo Credit :

ಶಿವಮೊಗ್ಗ :ಬಾಲಕಾರ್ಮಿಕ ಪದ್ದತಿಯಂತಹ ಅನಿಷ್ಟ ಪದ್ದತಿಗಳು ನಿರ್ಮೂಲನೆಯಾದಾಗ ಮಾತ್ರ ಯಾವುದೇ ಒಂದು ದೇಶ ಸಂಪೂರ್ಣವಾಗಿ ಅಭಿವೃದ್ದಿ ಹೊಂದಿದೆ ಎಂದು ಹೇಳಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬಿ.ಹೆಚ್.ರಸ್ತೆ(ಸೈನ್ಸ್ ಮೈದಾನ) ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದ ಅನೇಕ ಕಡೆ ಬಾಲಕಾರ್ಮಿಕ ಪದ್ದತಿ ಜಾರಿಯಲ್ಲಿದೆ. ಆದ್ದರಿಂದಲೇ ವಿಶ್ವದಾದ್ಯಂತ ಜೂ.12 ರಂದು ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಆಚರಿಸುವ ಮೂಲಕ ಈ ಪದ್ದತಿಯನ್ನು ಹೋಗಲಾಡಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ದೇಶದಲ್ಲಿ ಇಂತಹ ಅನಿಷ್ಟ ಪದ್ದತಿ ತೊಲಗಿದಾಗ ಮಾತ್ರ ಅಭಿವೃದ್ದಿ ಸಾಧ್ಯ. ಪ್ರತಿ ಮಗುವಿಗೆ ಶಿಕ್ಷಣದ, ಉತ್ತಮವಾಗಿ ಜೀವಿಸುವ ಹಕ್ಕಿದೆ. ಈ ಪದ್ದತಿ ನಿವಾರಣೆಯಾಗಬೇಕಾದರೆ ಎಲ್ಲ ಮಕ್ಕಳಿಗೆ ಶಿಕ್ಷಣ ಅತ್ಯವಶ್ಯ. ಮಕ್ಕಳು ಉನ್ನತವಾಗಿ ಬೆಳೆಯಲು ಸಹ ಶಿಕ್ಷಣ ಬೇಕು ಎಂದರು.
ವಿದ್ಯಾರ್ಥಿಗಳು, ಅಧಿಕಾರಿ/ನೌಕರರು ಅಥವಾ ಸಾರ್ವಜನಿಕರಿಗೆ ಬಾಲಕಾರ್ಮಿಕತೆ ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರ ಬಳಿ ತಿಳಿಸಬೇಕು. ಬಾಲಕಾರ್ಮಿಕತೆ, ಬಾಲ್ಯವಿವಾಹ ಸೇರಿದಂತೆ ಮಕ್ಕಳ ಯಾವುದೇ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಲು ಮಕ್ಕಳ ಸಹಾಯವಾಣಿ, ವಿವಿಧ ಇಲಾಖೆಗಳು, ಕಾನೂನು ಸೇವಾ ಪ್ರಾಧಿಕಾರಗಳು ಇವೆ. ಶಾಲೆಗಳಲ್ಲಿ ಲೀಗಲ್ ಕ್ಲಬ್ ಇದ್ದು ಮಕ್ಕಳು ಕರೆ ಮಾಡಿದಲ್ಲಿ ತಕ್ಷಣಕ್ಕೆ ಸ್ಪಂದಿಸಲಾಗುವುದು ಎಂದರು.

ನಾವು ಮಾತ್ರ ಚೆನ್ನಾಗಿದ್ದರೆ ಸಾಕು ಎನ್ನುವ ಮನೋಭಾವ ಹೋಗಬೇಕು. ಬಾಲ್ಯ ವಿವಾಹ, ಬಾಲಕಾರ್ಮಿಕತೆಯಿಂದ ಮಕ್ಕಳನ್ನು ಹೊರತರುವುದು ನಮ್ಮೆಲ್ಲರ ಕರ್ತವ್ಯ. ಸಮಾಜವನ್ನು ಸ್ವಚ್ಚಗೊಳಿಸಲುವಲ್ಲಿ ನಮ್ಮ ಅಲ್ಪ ಸೇವೆಯೂ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಇಂತಹ ಅನಿಷ್ಟ ಪದ್ದತಿಗಳ ನಿರ್ಮೂಲನೆ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರೇಖಾ.ಜಿ.ಎಂ ಮಾತನಾಡಿ, 18 ವರ್ಷದೊಳಗಿನ ಎಲ್ಲರೂ ಮಕ್ಕಳು. ಮಕ್ಕಳಿಂದ ದುಡಿಸಿಕೊಳ್ಳುವುದು ಮತ್ತು ಪೋಷಕರು ಇದನ್ನು ಬೆಂಬಲಿಸುವುದು ಕೂಡ ಶಿಕ್ಷಾರ್ಹ ಅಪರಾಧ. ಯಾವುದೇ ಮಕ್ಕಳಿಂದ ದುಡಿಸಿಕೊಳ್ಳುತ್ತಿರುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಕರೆ ಮಾಡಿ ತಿಳಿಸಬೇಕು. ಯಾವುದೇ ಮಗು ಸತತವಾಗಿ ಮೂರು ದಿನಗಳ ಕಾಲ ಶಾಲೆ ಬಿಟ್ಟಿದೆ ಎಂದರೆ ಅಂತಹ ಮಗುವನ್ನು ಶಾಲೆ ಬಿಟ್ಟ ಮಗು ಎಂದು ಪರಿಗಣಿಸಿ ವಿಚಾರಿಸಬೇಕು. ಶಾಲೆ ಬಿಟ್ಟ ಮಕ್ಕಳ ಅಪರಣವಾಗಿರಬಹುದು, ಬಾಲ್ಯವಿವಾಹವಾಗಿರಬಹುದು, ಬಾಲಕಾರ್ಮಿಕತೆಯಲ್ಲಿ ತೊಡಗಿರಬಹುದು ಹೀಗೆ ಅನೇಕ ಸಮಸ್ಯೆಗಳನ್ನು ಮಗು ಎದುರಿಸುತ್ತಿರಬಹುದು. ಆದ ಕಾರಣ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಗಮನಕ್ಕೆ ಬಂದ ಎಲ್ಲರೂ ಈ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಮಕ್ಕಳು ಮೊಬೈಲ್ ಬಳಕೆ ವೇಳೆ ಅತೀ ಜಾಗರೂಕರಾಗಿರಬೇಕು. ತಂದೆ ತಾಯಿಯವರ ಗೂಗಲ್ ಅಕೌಂಟ್‍ನಲ್ಲಿರುವ ಇಂತಹ ಮೊಬೈಲ್‍ನ್ನು ಮಕ್ಕಳು ಅಚಾತುರ್ಯವಾಗಿ ದುರ್ಬಳಕೆ ಮಾಡಿದಲ್ಲಿ ಪೋಷಕರು ಸೈಬರ್ ಪ್ರಕರಣ ಎದುರಿಸುವ ಸಾಧ್ಯತೆ ಕೂಡ ಇದೆ. ಆದ್ದರಿಂದ ಮೊಬೈಲ್‍ನ್ನು ಒಳ್ಳೆಯ ಉದ್ದೇಶಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೂ ಹೆಣ್ಣುಮಕ್ಕಳು ಹದಿವಯಸ್ಸಿನಲ್ಲಿ ಯಾವುದೇ ಉಡುಗೊರೆ ಮತ್ತೊಂದು ಆಮಿಷಕ್ಕೆ, ಆಕರ್ಷಣೆಗೆ ಗುರಿಯಾಗದೇ ಎಚ್ಚರಿಕೆಯಿಂದ ಇದ್ದು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡಬೇಕೆಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಕಾರ್ಮಿಕ ನಿರೀಕ್ಷಕ ಭೀಮೇಶ್.ಪಿ ಬಾಲಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿ 2016 ರ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಗೆ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಸಲಾಯಿತು.

ಜಿಲ್ಲಾ ಕಾರ್ಮಿಕಾಧಿಕಾರಿ ಸೀಬಿರಂಗಯ್ಯ ಸ್ವಾಗತಿಸಿದರು. ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ರಘುನಾಥ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೋಟೆ ಪೊಲೀಸ್ ಠಾಣೆ ಸಿಪಿಐ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಗಂಗೂಬಾಯಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕಮಲಮ್ಮ, ದೈಹಿಕ ಶಿಕ್ಷಣಾಧಿಕಾರಿ ನಾಗರಾಜ್, ಶಿಕ್ಷಣ ಇಲಾಖೆಯ ವೆಂಕಟೇಶ್ ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

ಕಾನೂನು ಅರಿವು ಜಾಥಾ:

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಜೂ.13 ರ ಬೆಳಿಗ್ಗೆ ಶಿವಪ್ಪನಾಯಕ ಸರ್ಕಲ್‍ನಲ್ಲಿ ಏರ್ಪಡಿಸಲಾಗಿದ್ದ ಸ್ತಬ್ದ ಚಿತ್ರ ವಾಹನ ಹಾಗೂ ಕರಪತ್ರ ಮೂಲಕ ಕಾನೂನು ಅರಿವು ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮುಸ್ತಫಾ ಹುಸೇನ್ ಎಸ್.ಎ. ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಆರ್. ಸೆಲ್ವಮಣಿ ಚಾಲನೆ ನೀಡಿದರು. ಈ ವೇಳೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಲ್ಲವಿ.ಬಿ.ಆರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ, ಜಿಲ್ಲಾ ಕಾರ್ಮಿಕ ಅಧಿಕಾರಿ ಸೀಬಿರಂಗಯ್ಯ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು