News Karnataka Kannada
Friday, May 10 2024
ಶಿವಮೊಗ್ಗ

ಶಿವಮೊಗ್ಗ: ಮಕ್ಕಳಿಗೆ ಭಾರತೀಯ ಶ್ರೇಷ್ಠ ಸಂಸ್ಕೃತಿಯ ಕುರಿತು ಶಿಕ್ಷಕರು ತಿಳಿಸಬೇಕು

Shivamogga: Teachers should educate children about Indian culture: KS Eshwarappa
Photo Credit : By Author

ಶಿವಮೊಗ್ಗ, ಸೆ.5: ಶಿಕ್ಷಕ ನಮ್ಮೆಲ್ಲರ ಗುರು. ದೇಶದ ಉದ್ದಾರಕರಾದ ಅವರು ಭಾರತೀಯ ಶ್ರೇಷ್ಠ ಸಂಸ್ಕೃತಿಯ ಕುರಿತು ಮಕ್ಕಳಿಗೆ ತಿಳಿಸಬೇಕೆಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಕರು ಎಲ್ಲಿಯವರೆಗೆ ‘ನನ್ನ ಶಾಲೆ ನನ್ನ ಮನೆ’ ಎಂದು ಅರಿತುಕೊಳ್ಳುವುದಿಲ್ಲವೋ ಅಲ್ಲೀವರೆಗೆ ಅಲ್ಲಿ ಅಭಿವೃದ್ದಿ ಸಾಧ್ಯವಾಗುವುದಿಲ್ಲ. ಶಾಲೆಗಳಿಗೆ ಏನು ಬೇಕೆಂದು ಶಿಕ್ಷಕರು, ಎಸ್‍ಡಿಎಂಸಿ ಯವರು ಚರ್ಚಿಸಬೇಕು. ಜನಪ್ರತಿನಿಧಿಗಳ ಬಳಿ ತಿಳಿಸಬೇಕು. ಆಗ ಸುಧಾರಣೆ ಸಾಧ್ಯ. ಉದಾಹರಣೆಗೆ ನಗರದ ಕೆ.ಆರ್.ಪುರಂ ಶಾಲೆಯಲ್ಲಿ ಕಳೆದ ಸಾಲಿನಲ್ಲಿ ಮೂಲಭೂತ ಸೌಕರ್ಯದಿಂದ ಕೇವಲ 8 ಮಕ್ಕಳು ಇದ್ದರು. ಈಗ ಎಲ್ಲ ಮೂಲಭೂತ ಸೌಕರ್ಯದೊಂದಿಗೆ ಉತ್ತಮ ವ್ಯವಸ್ಥೆ ಸೃಷ್ಟಿಸಿರುವುದರಿಂದ ಪ್ರಸ್ತುತ 300 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

30 ವರ್ಷಗಳ ಹಿಂದೆ ಶಾಸಕನಾದಾಗ ನಗರದ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಇರಲಿಲ್ಲ. ಪ್ರಸ್ತುತ ನಗರದ 89 ಶಾಲೆಗಳಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ. ಇನ್ನೂ ಕೆಲವು ಶಾಲೆಗಳಿಗೆ ಒದಗಿಸಬೇಕಿದೆ.
ಈ ವರ್ಷ ಸರ್ಕಾರದಿಂದ ಜಿಲ್ಲೆಗೆ 210 ಕೊಠಡಿಗಳು ಮಂಜೂರಾಗಿದ್ದು, ಇದೇ ವರ್ಷ ಇಷ್ಟು ಹೆಚ್ಚು ಕೊಠಡಿಗಳ ಮಂಜೂರಾತಿ ಆಗಿರುವುದು. ಸರ್ಕಾರ ಶಾಲೆಗಳ ಅಭಿವೃದ್ದಿಗೆ ಏನೇನು ಸೌಲಭ್ಯ ನೀಡಬೇಕೋ ಎಲ್ಲವನ್ನೂ ನೀಡುತ್ತಿದೆ. ಆದರೂ ಶಿಕ್ಷಕರಿಗೆ ಅನೇಕ ಸಮಸ್ಯೆಗಳಿವೆ. ಹಂತ ಹಂತವಾಗಿ ಇವುಗಳಿಗೆ ಪರಿಹಾರ ಕಂಡುಕೊಳ್ಳೋಣ. ನಿರಾಶರಾಗುವುದು ಬೇಡ. ಶಾಲೆಗಳ ಸುಧಾರಣೆ ಮತ್ತು ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಖಂಡಿತ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ಅತ್ಯುತ್ತಮ ಪ್ರಜೆಗಳನ್ನು ತಯಾರು ಮಾಡುವ ದೊಡ್ಡ ಜವಾಬ್ದಾರಿ ಹೊತ್ತಿರುವ ಶಿಕ್ಷಕರಿಗೆ ಪ್ರಸ್ತುತ ವೈಜ್ಞಾನಿಕ ಯುಗದಲ್ಲಿ ತಾವು ಅಪ್‍ಗ್ರೇಡ್ ಆಗಿ ಮಕ್ಕಳಿಗೆ ಶಿಕ್ಷಣ ನೀಡುವ ದೊಡ್ಡ ಸವಾಲು ಇದೆ. ಯಾವುದೇ ರೀತಿಯ ಬಡ್ತಿ ಇಲ್ಲದೇ ಒಂದೇ ಹುದ್ದೆಯಲ್ಲಿ ಪಾಠ ಹೇಳುವ ಶಿಕ್ಷಕರನ್ನು ಗುರುತಿಸುವ ಕೆಲಸ ಹಾಗೂ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಸರ್ಕಾರದ್ದಾಗಿದೆ ಎಂದರು.

ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ ಮಾತನಾಡಿ, ಶಿಕ್ಷಕರು ರಾಷ್ಟ್ರ ನಿರ್ಮಾತೃಗಳು. ಸಜ್ಜನರ ಸೃಷ್ಟಿ ಶಿಕ್ಷಕರ ಕೈಯಲ್ಲಿದೆ. ಪ್ರಸ್ತುತ ನೂತನ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಅದನ್ನು ಸ್ವಾಗತಿಸೋಣ. ಆದರೆ ಅದಕ್ಕೆ ತಕ್ಕುದಾದ ಮೂಲಭೂತ ಸೌಕರ್ಯ ಸೇರಿದಂತೆ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಇಂದು ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಯೋಜನೆಗಳು, ಕಾರ್ಯಕ್ರಮಗಳನ್ನು ತಂದು ಹೆಚ್ಚುವರಿ ಶಿಕ್ಷಕರು, ಸಿಬ್ಬಂದಿ, ಪೂರಕ ವ್ಯವಸ್ಥೆ ಮಾಡದೇ ಇರುವ ಶಿಕ್ಷಕರ ಕೈಯಲ್ಲೇ ಎಲ್ಲ ಕೆಲಸ ಮಾಡಿಸುತ್ತಿದೆ. ಬಿಸಿಯೂಟ, ವಿದ್ಯಾರ್ಥಿವೇತನಗಳು, ಜನಗಣತಿ, ಚುನಾವಣೆ ಇನ್ನೂ ಹಲವಾರು ಕಾರ್ಯದಲ್ಲಿ ಶಿಕ್ಷಕರನ್ನೇ ಸಂಪೂರ್ಣವಾಗಿ ತೊಡಗಿಸುತ್ತಿದ್ದು, ಮಕ್ಕಳಿಗೆ ಪಾಠ ಹೇಳುವವರು ಯಾರು ಎಂಬಂತಾಗಿದೆ ಎಂದ ಅವರು ಶಾಸಕರು ಇತ್ತ ಗಮನ ಹರಿಸಬೇಕೆಂದು ಅವರ ಗಮನ ಸೆಳೆದರು.

ಶಿಕ್ಷಕರು ಪಾಠ ಮಾಡುವುದನ್ನು ಬಿಡಿಸಿ ಇತರೆ ಕೆಲಸಕ್ಕೆ ಹಚ್ಚುವ ಅವೈಜ್ಞಾನಿಕ ಸುತ್ತೋಲೆಗಳು ನಿಲ್ಲಬೇಕು. ಶಿಕ್ಷಕರಿಗೆ ಪಾಠ ಮಾಡಲು ಬಿಡಬೇಕು. ಪಠ್ಯ ಪುಸ್ತಕ ವಿತರಣೆಯಿಂದ ಹಿಡಿದು ಎನ್‍ಪಿಎಸ್(ನ್ಯೂ ಪೆನ್ಶನ್ ಸ್ಕೀಂ) ವರೆಗೆ ಗೊಂದಲಗಳಿವೆ. ಅದೇ ರೀತಿ ಸರ್ಕಾರಿ ಶಿಕ್ಷಕರಿಗೆ ದೊರೆಯುವ ಹೆರಿಗೆ ರಜೆ, ವೇತನ, ನಗದುರಹಿತ ಆರೋಗ್ಯ ಯೋಜನೆಯಂತಹ ಸೌಲಭ್ಯಗಳು ಅನುದಾನಿತ, ಖಾಸಗಿ ಶಾಲಾ ಶಿಕ್ಷಕರಿಗೂ ಲಭ್ಯವಾಗಬೇಕು. ಎಲ್ಲ ಶಿಕ್ಷಕರೂ ಸಮಾನರು. ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಅನೇಕ ಸಮಸ್ಯೆಗಳು, ಗೊಂದಲಗಳಿವೆ. ರಾಜಕಾರಣಿಗಳಿಗೇ ಓಪಿಎಸ್(ಓಲ್ಡ್ ಪೆನ್ಶನ್ ಸ್ಕೀಂ)ಇದ್ದು, ಈಗಿನ ಸರ್ಕಾರಿ ನೌಕರರಿಗೇಕೆ ಎನ್‍ಪಿಎಸ್? ನೌಕರರ ಹಕ್ಕಾದ ಪಿಂಚಣಿ ನೀಡಬೇಕು. ಪ್ರಸ್ತುತ ವ್ಯವಸ್ಥೆಯಲ್ಲಿ ಇರುವ ಹಲವಾರು ತಾರತಮ್ಯಗಳನ್ನು ಹೋಗಲಾಡಿಸಬೇಕಾದರೆ ಆಡಳಿತದಲ್ಲಿ ಸಂಚಲನ ಮೂಡಿಸುವ ಕೆಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಶಾಸಕರಾದ ಎಸ್.ರುದ್ರೇಗೌಡರು ಮಾತನಾಡಿ, ಪ್ರಸ್ತುತ ಶೇ.84 ಸಾಕ್ಷರತೆ ಸಾಧಿಸಿದ್ದೇವೆ. ಇದು ಶಿಕ್ಷಕರ ಕೊಡುಗೆಯಾಗಿದೆ. ಸಾಕ್ಷರ ಸಮಾಜದಲ್ಲಿ ಎಲ್ಲ ಚಟುವಟಿಕೆಗಳು ಪ್ರಜ್ಞಾಪೂರ್ವಕವಾಗಿ ನಡೆಯಲು ಸಾಧ್ಯ. ಆದ್ದರಿಂದ ಶಿಕ್ಷಣಕ್ಕೆ ಅತಿ ಹೆಚ್ಚು ಮಹತ್ವವಿದೆ. ಶಿಕ್ಷಕರ ಅನೇಕ ಸಮಸ್ಯೆಗಳಿದ್ದು ಅವುಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು ಎಂದರು.

ಚಿಕ್ಕಮಗಳೂರು ಜಿಲ್ಲೆಯ ಸಾಹಿತಿಗಳಾದ ಚಟ್ನಹಳ್ಳಿ ಮಹೇಶ್ ಶಿಕ್ಷಕರ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 28 ಶಿಕ್ಷಕರಿಗೆ ನೀಡಿ ಗೌರವಿಸಲಾಯಿತು.
ಡಿಡಿಪಿಐ ಪರಮೇಶ್ವರಪ್ಪ ಸಿ.ಆರ್ ಸ್ವಾಗತಿಸಿದರು. ಮಹಾನಗರಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ,ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ.ಸಿದ್ದಬಸಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಕೆ.ದಿವಾಕರ, ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ರುದ್ರಪ್ಪ, ದೈ.ಶಿ.ಶಿ ಸಂಘದ ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ವೈ.ಧರ್ಮಪ್ಪ, ಎಂ.ರವಿ, ರಾಘವೇಂದ್ರ ಸಿ.ಎಸ್, ಕಾಳಾನಾಯ್ಕ ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ.ಪಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಬಸವರಾಜಪ್ಪ.ಬಿ.ಆರ್, ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು