News Karnataka Kannada
Saturday, May 04 2024
ಶಿವಮೊಗ್ಗ

ಶಿವಮೊಗ್ಗದಲ್ಲಿ ಮಂಜುನಾಥ ಭಂಡಾರಿ ಅವರಿಗೆ ಅಭಿನಂದನಾ ಸಮಾರಂಭ

Shivamogga
Photo Credit :

ಶಿವಮೊಗ್ಗ : ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಮಂಜುನಾಥ ಭಂಡಾರಿ ಅವರಿಗೆ  ಅಭಿನಂದನಾ ಸಮಾರಂಭ ಇಂದು ಶಿವಮೊಗ್ಗದ  ಕುವೆಂಪು ರಂಗಮಂದಿರದಲ್ಲಿ ನಡೆಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಯುವ ನಾಯಕರ ಪಡೆ ಕಟ್ಟಿಕೊಂಡು ರಾಜಕೀಯಕ್ಕೆ ಪರಿಚಯಿಸಿದ ಅಪರೂಪದ ವ್ಯಕ್ತಿಯಾಗಿರುವ ಮಂಜುನಾಥ ಭಂಡಾರಿ  ಅವರ ಆಶಯ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದರು.

ಪ್ರತಿಫಲಾಪೇಕ್ಷೆ ಇಲ್ಲದೇ, ಅಧಿಕಾರದ ಲಾಲಸೆ ಇಲ್ಲದೇ ಪಕ್ಷ ಸಂಘಟನೆಗೆ ತಮ್ಮ ಇಡೀ ಜೀವನ ಮುಡುಪಾಗಿಟ್ಟವರು ಮಂಜುನಾಥ ಭಂಡಾರಿ, ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಯುವ ರಾಜಕಾರಣಿಯಾಗಿ ಪಕ್ಷದ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ.

ಪಕ್ಷದ ಹಿರಿಯ ಮುಖಂಡರಾದ ಆಸ್ಕರ್ ಫೆರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದೊಂದಿಗೆ ಅನೇಕ ಜವಾಬ್ದಾರಿ ಹೊತ್ತುಕೊಂಡು ಪಕ್ಷಕ್ಕೆ ಸೇವೆ ಸಲ್ಲಿಸಿರುವ ಇವರು 20 ವರ್ಷಗಳ ಹಿಂದೆಯೇ ವಿಧಾನ ಪರಿಷತ್ ಅಥವಾ ರಾಜ್ಯಸಭಾ ಸದಸ್ಯರಾಗಬಹುದಿತ್ತು. ತಡವಾಗಿಯಾದರೂ ಸ್ಪರ್ಧೆ ಮಾಡಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ ಎಂದರು.

ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಮಾತನಾಡಿ, ಭಂಡಾರಿಯವರು ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ನೇಹಜೀವಿಯಾಗಿದ್ದಾರೆ. ಯುವಕರ ಆಶಾಕಿರಣವಾಗಿದ್ದಾರೆ. ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ  ಆದ ಛಾಪು ಮೂಡಿಸಿದ್ದಾರೆ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೂ ಪಕ್ಷ ಸಂಘಟನೆ ಹಾಗೂ ಪಕ್ಷ ಬೆಳೆಸುವ  ಕಾರ್ಯವೈಖರಿ ಮಂಜುನಾಥ ಭಂಡಾರಿ ಅವರಿಂದ ಕಲಿಯಬೇಕಾಗಿದೆ. ಹಾಗೂ ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆಗೆ ಅಗತ್ಯವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಕಾಲೇಜು ದಿನಗಳಿಂದಲೂ ನಾನು ಮತ್ತು ಮಂಜುನಾಥ ಭಂಡಾರಿ ಅವರು ಆತ್ಮೀಯ ಸ್ನೇಹಿತರು. ಅವರು ಎನ್.ಎಸ್.ಯು.ಐ.ನಲ್ಲಿದ್ದರು. ನಾನು ಎಬಿವಿಪಿಯಲ್ಲಿದ್ದೆ. ಈಗ ಬೇರೆ ಬೇರೆ  ಪಕ್ಷದಲ್ಲಿದ್ದೇವೆ. ಆದರೂ, ನಮ್ಮ ಸ್ನೇಹಕ್ಕೆ ಯಾವುದೇ ರೀತಿ ಅಡ್ಡಿಯಾಗಿಲ್ಲ. ಚುನಾವಣಾ ಸಮಯದಲ್ಲಿ ಮಾತ್ರ ನಮ್ಮ ನಮ್ಮ ಕಿತ್ತಾಟಗಳಿರುತ್ತವೆ. ಆಮೇಲೆ ನಮ್ಮ ಸ್ನೇಹಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ರಾಜಕೀಯ ಸಿದ್ಧಾಂತಗಳೇ ಬೇರೆ, ಸ್ನೇಹದ ತತ್ವವೇ ಬೇರೆ ಎಂದರು.

ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಬಲಿಷ್ಠಗೊಳ್ಳಲು ಭಂಡಾರಿಯವರು ಕಾರಣವಾಗಿದ್ದಾರೆ. ಅವರು ಒಂದು ರೀತಿಯಲ್ಲಿ ಸೈನಿಕನಿದ್ದಂತೆ. ಲೋಕಸಭೆ ಪ್ರವೇಶ ಯಾವಾಗಲೋ ಪಡೆಯಬೇಕಿತ್ತು. ಆದರೆ, ಆಗಿರಲಿಲ್ಲ.  ಈಗ ಪರಿಷತ್ ಸದಸ್ಯರಾಗಿದ್ದಾರೆ. ಅವರಿಂದ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯಾಗಲಿ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಂಜುನಾಥ ಭಂಡಾರಿ, ನಾನು ಯಾವತ್ತೂ ಕೂಡ ಸನ್ಮಾನ ಮತ್ತು ಅಭಿನಂದನೆಗಳಿಂದ ಯಾವತ್ತೂ ದೂರ. ಆದರೆ, ನನ್ನ ಸಹೋದ್ಯೋಗಿಗಳು ಮತ್ತು ಪಕ್ಷದ ಕಾರ್ಯರ್ತರು 35 ವರ್ಷಗಳಿಂದ ನೀವು ಹೇಳಿದ್ದನ್ನು ನಾವು ಕೇಳಿದ್ದೇವೆ. ಈ ಬಾರಿ ನೀವು ಅಭಿನಂದನೆ ಸ್ವೀಕರಿಸಲೇಬೇಕೆಂದು ಒತ್ತಡ ಹೇರಿದ್ದಕ್ಕೆ ಒಪ್ಪಿಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷ ಕಟ್ಟಿ  ಬೆಳೆಸುವ ಆಸೆ ಬಿಟ್ಟರೆ ನಾನು ಯಾವತ್ತೂ ಎಂಪಿ, ಎಂಎಲ್ಎ ಆಗಬೇಕೆಂಬ ಆಸೆ ಹೊಂದರಲಿಲ್ಲ. ಬಯಸಿದ್ದಲ್ಲಿ ಯಾವತ್ತೋ ನನಗೆ ಸಿಗುತ್ತಿತ್ತು. ರಾಜಕಾರಣ, ಚುನಾವಣೆ ಕೇವಲ ಎರಡು ತಿಂಗಳಿಗಷ್ಟೇ ಉಳಿದ 4 ವರ್ಷ 10 ತಿಂಗಳು ಎಲ್ಲಾ ಪಕ್ಷದವರು ಕೂಡ ನನಗೆ ಆತ್ಮೀಯತೆಯಿಂದ ಬೆಳೆಸಿದ್ದಾರೆ ಮತ್ತು ಉತ್ತಮ ಸಂಬಂಧ ಹೊಂದಿದ್ದಾರೆ. ಆದ್ದರಿಂದ ದಕ್ಷಿಣ ಕನ್ನಡದಲ್ಲಿ ನನ್ನ ಗೆಲುವು ಸಾಧ್ಯವಾಯಿತು. ನನ್ನ ಹುಟ್ಟಿ ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಶಿವಮೊಗ್ಗ ಜಿಲ್ಲೆಯನ್ನು ಮರೆತುಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಈ ಸಂದರ್ಭದಲ್ಲಿ ಮಂಜುನಾಥ ಭಂಡಾರಿ ಹಾಗೂ ಶ್ರೀಮತಿ ಪ್ರಸನ್ನಾ ಭಂಡಾರಿ ಅವರನ್ನು ಅಭಿನಂದಿಸಲಾಯಿತು.  ಕಾರ್ಯಕ್ರಮದ ಸಾನಿಧ್ಯವನ್ನು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಮಧುಬಂಗಾರಪ್ಪ, ಅಭಿನಂದನಾ ಸಮಿತಿ ಅಧ್ಯಕ್ಷ ನಾಗರಾಜ್, ರಾಧಾಕೃಷ್ಣ, ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು