News Karnataka Kannada
Monday, May 06 2024
ಶಿವಮೊಗ್ಗ

ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ; ಡಾ. ಆರ್. ಸೆಲ್ವಮಣಿ

Shivamogga
Photo Credit : News Kannada

ಶಿವಮೊಗ್ಗ : ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಮಾ. 2 ರಂದು ಶಾಂತಿಗಾಗಿ ನಾವು ಸೌಹಾರ್ದ ಸಭೆ ನಡೆಯಿತು. ಡಿಸಿ, ಎಸ್‌ಪಿ ಸೇರಿದಂತೆ ವಿವಿಧ ಧರ್ಮದ ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು, ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿ ಶಾಂತಿಯ ಮಂತ್ರವನ್ನು ಜಪಿಸಿದರು.ಶಾಂತಿ ಸೌಹಾರ್ದತೆಯ ಧ್ಯೋತಕವಾದ ಕೇಸರಿ, ಬಿಳಿ ಮತ್ತು ಹಸಿರು ಬಟ್ಟೆಗಳನ್ನು ಜೋಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಕೆಲವರು ಗಲಾಟೆ ಎಬ್ಬಿಸಿ ಗೊಂದಲ ಮೂಡಿಸುತ್ತಿದ್ದಾರೆ. ಇದು ತಪ್ಪು, ಜಿಲ್ಲಾಡಳಿತ ಈ ಬಗ್ಗೆ ಸದಾ ಎಚ್ಚರಿಕೆಯಿಂದ ಇರುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳು ನಡೆಯಬಾರದು. ನಾವೆಲ್ಲರೂ ಸಹೋದರ ಭಾವನೆಯಿಂದ ಇರಬೇಕು. ಭಾರತೀಯ ಸಂಸ್ಕೃತಿಯೇ ವಿಶೇಷವಾದುದು. ಆ ದಿಕ್ಕಿನತ್ತ ಕೆಲಸ ಮಾಡೋಣ, ಶಾಂತಿಯನ್ನು ಕಾಪಾಡೋಣ ಎಂದು ಕರೆನೀಡಿದರು.

ಜಡೆ ಸಂಸ್ಥಾನದ ಡಾ. ಮಹಾಂತಸ್ವಾಮಿಗಳು ಮಾತನಾಡಿ, ಇಲ್ಲಿ ಎಲ್ಲಾ ಧರ್ಮಗಳು ಒಟ್ಟಾಗಿ ಬಾಳುತ್ತಿವೆ. ಎಲ್ಲಾ ಧರ್ಮದ ಸಾರಗಳು ಮಾನವೀಯತೆಯೇ ಆಗಿದೆ. ಇಂತಹ ಭಾರತದಲ್ಲಿ ಆಗಾಗ ಶಾಂತಿ ಕದಡುವ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಶಾಂತಿ ಸೌಹಾರ್ದತೆ ಕಾಪಾಡಬೇಕಾದುದು ನಮ್ಮ ಕರ್ತವ್ಯ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಂತ್ರವನ್ನು ನಾವು ತಿಳಿಯಬೇಕಾಗಿದೆ. ಆ ನಿಟ್ಟಿನತ್ತ ಹೆಜ್ಜೆ ಹಾಕೋಣ. ಎಲ್ಲಾ ಧರ್ಮದವನ್ನು ಸಮಾನವಾಗಿ ಕಾಣೋಣ ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಮಾತನಾಡಿ, ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಿದಾಗ, ಮತ್ತು ಸಮುದಾಯಗಳು ಸ್ಪಂದಿಸಿದಾಗ, ಇಂತಹ ಘಟನೆಗಳಾದಾಗ ಶಾಂತಿ ಕಾಪಾಡಲು ಸಾಧ್ಯವಾಗುತ್ತದೆ. ಶಿವಮೊಗ್ಗದಲ್ಲಿ ನಡೆದ ಇತ್ತೀಚಿನ ಘಟನೆ ಇದೇನು ಹೊಸದಲ್ಲ, ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಕೆಲವು ದುಷ್ಟ ಶಕ್ತಿಗಳು ಇದರ ಹಿಂದೆ ಇರುತ್ತವೆ. ಆ ಬಗ್ಗೆ ಕ್ರಮ ಕೈಗೊಳ್ಳುವುದು ಪೊಲೀಸ್ ಇಲಾಖೆ ಕೆಲಸವಾಗಿದೆ. ಶಿವಮೊಗ್ಗದಲ್ಲಿ ಎಲ್ಲಾ ಸಮುದಾಯದಲ್ಲೂ ಹಿರಿಯರಿದ್ದಾರೆ. ಅವರೆಲ್ಲ ಒಟ್ಟಾಗಿ ಶಾಂತಿ ಕಾಪಾಡುವತ್ತ ಶ್ರಮಿಸುವ ಜೊತೆಗೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಸಹಕರಿಸಬೇಕೆಂದು ಕರೆ ನೀಡಿದರು.

ಇಂತಹ ಅಹಿತಕರ ಘಟನೆಗಳು ನಡೆದಾಗ ಬಡವರು ಬದುಕು ಕಳೆದುಕೊಳ್ಳುತ್ತಾರೆ. ಆದರೆ ಅದಕ್ಕೆ ಅವಕಾಶ ನೀಡಬಾರದು ಎಂದು ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಹೇಳಿದರು. ಧರ್ಮಗುರುಗಳಾದ ನಾವುಗಳು ಜನರಿಗೆ ಸೌಹಾರ್ದತೆಯ ಪಾಠ ಮಾಡಲು ಎಲ್ಲೋ ಒಂದೆಡೆ ವಿಫರಾಗಿ ದ್ದೇವೆ ಎಂದು ವಿಷಾದಿಸಿದ ಶ್ರೀಗಳು, ಮನುಷ್ಯತ್ವ ಮೀರಿದ ಯಾವುದೇ ಧರ್ಮವಿಲ್ಲ. ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಧರ್ಮ ಗುರುಗಳ ಹೆಗಲ ಮೇಲಿದೆ. ನನ್ನ ಧರ್ಮ ನಾನು ಪಾಲನೆ ಮಾಡುವ ಜೊತೆಗೆ ಇತರ ಧರ್ಮಗಳನ್ನು ಕೂಡ ಸಂತೋಷದಿಂದ ಆಚರಣೆ ಮಾಡಲು ಬಿಡಬೇಕು ಎಂದು ಕರೆ ನೀಡಿದರು.

ಕೂಡಲಿ ಶೃಂಗೇರಿ ಮಹಾಸಂಸ್ಥಾನ ಮಠದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಮಾತನಾಡಿ, ಭಾರತ ವಿವಿಧೆತೆಯಲ್ಲಿ ಏಕತೆ ಹೊಂದಿದ ರಾಷ್ಟ್ರವಾಗಿದೆ. ವಿಶ್ವದಲ್ಲಿಯೇ ಸ್ನೇಹ, ಸಹನೆ, ಶಾಂತಿಗೆ ಹೆಸರಾದ ದೇಶವಾಗಿದೆ. ಅಶಾಂತತೆಯನ್ನು ಯಾವ ಧರ್ಮವೂ, ದೇವರೂ ಹೇಳಿಲ್ಲ. ಬಯಕೆ ಸಿಗದಾಗ ದ್ವೇಷದ ಭಾವನೆ ಉತ್ಪತ್ತಿಯಾಗುತ್ತದೆ. ಆಗ ಸಂಘರ್ಷ ಏರ್ಪಡುತ್ತದೆ. ಶಾಂತಿ ಪ್ರಧಾನವಾಗಬೇಕು. ಮಾನವ ಸಂಬಂಧಗಳು ಗಟ್ಟಿಯಾಗಬೇಕು ಎಂದರು.

ಮಲ್ವಿಗಳಾದ ಮಲಾನ ಶಾಹುಲ್ ಹಮೀದ್ ಮುಸ್ಲಿಯಾರ್ ಮಾತನಾಡಿ, ನಾಡಗೀತೆಯಲ್ಲಿ ಹೇಳಿರುವ ಹಾಗೆ ವಿವಿಧ ಜತಿ, ಧರ್ಮ, ಸಂಸ್ಕೃತಿಯುಳ್ಳ ದೇಶ ನಮ್ಮದಾಗಿದ್ದು, ಹೂದೋಟದಲ್ಲಿ ವಿವಿಧ ಜತಿಯ ಹೂಗಳಿದ್ದು, ಅದನ್ನು ಪೋಣಿಸಿದಾಗ ಸುಂದರ ಹಾರವಾಗುವ ಹಾಗೆ ನಾವೆಲ್ಲರೂ ಪರಸ್ಪರ ಶಾಂತಿ, ಪ್ರೀತಿಯಿಂದ ಇರಬೇಕು. ಕೊಲೆ ಪಾತಕರಿಗೆ ಧರ್ಮವಿಲ್ಲ. ಕೋಮು ಸಂಘರ್ಷ ದಿಂದ ನಾಡಿನ ಪ್ರಗತಿಗೆ ಹಿನ್ನಡೆ ಯಾಗುತ್ತದೆ. ಗಾಳಿ, ನೀರು, ರಕ್ತಕ್ಕೆ ಯಾವುದೇ ಜತಿ, ಧರ್ಮವಿಲ್ಲ ಎಂಬುದನ್ನು ಎಲ್ಲರೂ ತಿಳಿಯಬೇಕು ಎಂದರು.

ಸೇಕ್ರೆಡ್ ಹಾರ್ಟ್ ಚರ್ಚ್‌ನ ಫಾದರ್ ಸ್ಟ್ಯಾನಿ ಡಿಸೋಜ ಅವರು ಮಾತನಾಡಿ, ಜಗದಲ್ಲೆಲ್ಲ ಶಾಂತಿ ಇರಲಿ, ಆದರೆ ಅದು ನನ್ನಿಂದಲೇ ಪ್ರಾರಂಭವಾಗಲಿ ಎಂಬ ಮಾತಿದೆ. ನಿಯಂತ್ರಣ ತಪ್ಪಿದಾಗ ಕೋಪ ಬಂದು ಆಸ್ತಿ, ಪಾಸ್ತಿಯ ಜೊತೆಗೆ ಮಾನಸಿಕ ಆರೋಗ್ಯ ನಷ್ಟವಾಗಿ ಸಾಮಾಜಿ ಸ್ವಾಸ್ಥ್ಯದ ನಷ್ಟವೂ ಉಂಟಾಗುತ್ತದೆ. ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯವೂ ಎಲ್ಲಾ ಧರ್ಮಕ್ಕೂ ಮಸಿಬಳಿಯುವಂತಾಗಿದೆ ಎಂದರು.
ಕಾರ್ಯಕ್ರಮ ಆಯೋಜಕ ಹಾಗೂ ಖ್ಯಾತ ವಕೀಲರಾದ ಕೆ.ಪಿ. ಶ್ರೀಪಾಲ್, ಪ್ರಾಸ್ತಾವಿಕವಾಗಿ ಮಾತನಾಡಿದರು.

ಎ.ಟಿ.ಎನ್.ಸಿ. ಕಾಲೇಜಿನ ಪ್ರಾಂಶುಪಾಲ ಸುರೇಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್. ಗೋಪಿನಾಥ್, ವಿಶ್ವ ಹಿಂದೂ ಪರಿಷತ್‌ನ ರಮೇಶ್ ಬಾಬು ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ರೈತ ಮುಖಂಡ ಕೆ.ಟಿ. ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಮಲಾನಾ ಈರ್ ಶಾದ್ ಅಹಮ್ಮದ್ ಖಾನ್ ಉಪಸ್ಥಿತರಿದ್ದರು. ಎಂ. ಗುರುಮೂರ್ತಿ ಸ್ವಾಗತಿಸಿದರು. ಕೆ. ಯುವರಾಜ್ ದೇಶಭಕ್ತಿಗೀತೆ ಹಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು