News Karnataka Kannada
Wednesday, May 08 2024
ಚಿಕಮಗಳೂರು

ಚಿಕ್ಕಮಗಳೂರು: ಜಿಲ್ಲೆಯ ಗಿರಿಶ್ರೇಣಿ ಹಾಗೂ ಪರಿಸರ ಸೂಕ್ಷ್ಮ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆಗೆ ಕಡಿವಾಣ ಹಾಕಲು ಪರಿಸರ ಸಂಘಟನೆಗಳ ಜಿಲ್ಲಾಡಳಿತವನ್ನು ಒತ್ತಾಯ

News
Photo Credit :

ಚಿಕ್ಕಮಗಳೂರು: ಜಿಲ್ಲೆಯ ಗಿರಿಶ್ರೇಣಿ ಹಾಗೂ ಪರಿಸರ ಸೂಕ್ಷ್ಮ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆಗೆ ಕಡಿವಾಣ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರ ಸಂಘಟನೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿವೆ.

ಭದ್ರಾ ವೈಲ್ಡ್‌ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ, ವೈಲ್ಡ್ ಕ್ಯಾಟ್-ಸಿ ಸಂಘಟನೆಯ ಶ್ರೀದೇವ್ ಹುಲಿಕೆರೆ ಹೇಳಿಕೆ ನೀಡಿ, ವಾರಾಂತ್ಯ ಹಾಗೂ ಸರಣಿ ರಜೆಗಳ ಸಂದರ್ಭದಲ್ಲಿ ಜಿಲ್ಲೆಯ ಸೂಕ್ಷ್ಮ ಪ್ರವಾಸಿ ತಾಣಗಳಿಗೆ ಆ ಪ್ರದೇಶಗಳ ತಾಳಿಕೆ ಮಿತಿಯನ್ನು ಮೀರಿ ಪ್ರವಾಸಿಗರು ಬಂದು ತುಂಬುತ್ತಿದ್ದರೂ ಜಿಲ್ಲಾಡಳಿತ ಕಂಡೂ ಕಾಣದಂತೆ ಕುಳಿತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನವರಾತ್ರಿಯ ಒಂಭತ್ತು ದಿನಗಳ ಕಾಲ ಚಂದ್ರದ್ರೋಣ ಪರ್ವತದ ಪ್ರವಾಸಿ ಧಾಮಗಳೂ ಸೇರಿದಂತೆ ಮೂಡಿಗೆರೆಯ ದೇವರಮನೆ, ಕುದುರೆಮುಖ ಮತ್ತು ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ಈ ಎಲ್ಲಾ ಪ್ರದೇಶಗಳಲ್ಲೂ ವಾಹನ ದಟ್ಟಣೆ ವಿಪರೀತವಾಗಿತ್ತಲ್ಲದೆ, ಅಷ್ಟೇ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆದಿರುವುದು ಈ ಸೂಕ್ಷ್ಮ ಪ್ರದೇಶಗಳಲ್ಲಿ ಕಂಡು ಬಂದಿದೆ ಎಂದು ದೂರಿದ್ದಾರೆ.

ಚಂದ್ರದ್ರೋಣ ಪರ್ವತ ಶ್ರೇಣಿ ಹಾಗೂ ಕೆಮ್ಮಣ್ಣುಗುಂಡಿ, ಹೆಬ್ಬೆ ಜಲಪಾತ ಪ್ರದೇಶಗಳಿಗೆ ಪ್ರವಾಸಿಗರ ನೂಕುನುಗ್ಗಲೇ ಕಂಡು ಬಂತು. ವಾಹನಗಳ ದಟ್ಟಣೆ ವಿಪರೀತವಾಗಿ ಸ್ಥಳೀಯರ ಓಡಾಟಕ್ಕೂ ತೊಡಕುಂಟಾಯಿತು. ತ್ಯಾಜ್ಯದ ಉಪಟಳದ ಜೊತೆಗೆ ಈ ಹಸಿರಿನ ತಾಣ ವಾಹನಗಳ ಶಬ್ದ ಹಾಗೂ ಹೊಗೆ ಉಗುಳುವಿಕೆಯಿಂದ ಕಿರಿ ಕಿರಿ ಮತ್ತು ಮಾಲಿನ್ಯಕ್ಕೆ ಒಳಗಾಯಿತು ಎಂದು ಆರೋಪಿಸಿದ್ದಾರೆ.

ಈ ಪ್ರದೇಶ ಜಲಮೂಲಗಳೂ ಆಗಿದ್ದು ಕೆಲವು ಕಡೆ ಅವು ಹುಟ್ಟುವ ಜಾಗವನ್ನೇ ಪ್ರವಾಸಿಗರು ಮಾಲಿನ್ಯಗೊಳಿಸಿದ್ದಾರೆ. ಆ ನೀರು ತಪ್ಪಲಿನ ನಿವಾಸಿಗಳ ಕುಡಿಯುವ ನೀರಿನ ಮೂಲವೂ ಆಗಿದ್ದರ ಪರಿವೇ ಅವರಿಗೆ ಇರಲಿಲ್ಲ. ಆ ಬಗ್ಗೆ ಯಾವುದೇ ರೀತಿಯ ಕಟ್ಟುಪಾಡು ಇಲ್ಲದಂತೆ ಈ ಜಲಮೂಲಗಳು ಮಾಲಿನ್ಯಕ್ಕೆ ಒಳಗಾಗುತ್ತಿವೆ ಎಂದಿದ್ದಾರೆ.

ಈ ಸೂಕ್ಷ್ಮ ಪ್ರದೇಶಗಳಿಗೆ ಆ ಪ್ರದೇಶಗಳ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರಿಗೆ ಅನುಮತಿ ನೀಡುವ ಯಾವುದೇ ಕನಿಷ್ಠ ಕ್ರಮವನ್ನೂ ಜಿಲ್ಲಾಡಳಿತ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದ್ದಾರೆ.

ಇತ್ತೀಚೆಗೆ ಕೆಲವು ದಿನಗಳ ಹಿಂದೆ ವಾರಾಂತ್ಯದಲ್ಲಿ ಜಿಲ್ಲಾಡಳಿತ ಒಂದು ದಿನಕ್ಕೆ ೩೦೦ ವಾಹನ ಮಾತ್ರ ತೆರಳಲು ಅನುಮತಿ ನೀಡಿ, ಹೋಗಿ ಬರಲು ಸಮಯ ನಿಗದಿ ಮಾಡಿತ್ತು. ಆದರೆ ಯಾವುದೋ ಒತ್ತಡಕ್ಕೆ ಒಳಗಾಗಿ ಜಿಲ್ಲಾಡಳಿತ ಈ ಒಂದು ನಿಯಂತ್ರಣವನ್ನು ದಸರಾ ಹಬ್ಬದ ಸಮಯದಲ್ಲಿ ಜಾರಿಗೊಳಿಸದೆ ಸಡಿಲಗೊಳಿಸಿದ ಕಾರಣ ಈ ಸೂಕ್ಷ್ಮ ಪ್ರದೇಶಗಳು ಜನ ಹಾಗೂ ವಾಹನ ದಟ್ಟಣೆಯಿಂದ ನಲುಗಿದವು ಎಂದಿದ್ದಾರೆ.

ಜಿಲ್ಲಾಡಳಿತವನ್ನು ಪರಿಸರಾಸಕ್ತರು ಹಾಗೂ ಈ ಜಿಲ್ಲೆಯ ಹಲವು ನಾಗರಿಕರು ಈ ಪ್ರವಾಸಿ ನೂಕುನುಗ್ಗಲನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡು ಈ ಪ್ರದೇಶಗಳು ಮಾಲಿನ್ಯಗೊಳ್ಳದಂತೆ ಹಾಗೂ ಈ ಪ್ರದೇಶದಲ್ಲಿ ಸತತವಾಗಿ ವನ್ಯಜೀವಿಗಳ ಓಡಾಟವೂ ಇರುವುದರಿಂದ ಅವುಗಳ ಬದುಕಿಗೂ ಮಾರಕವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದಾರೆ.

ಆದರೆ ಈ ಬಗ್ಗೆ ಒಂದು ಖಾಯಂ ಪರಿಹಾರವನ್ನು ಕೈಗೊಳ್ಳುವಲ್ಲಿ ಜಿಲ್ಲಾಡಳಿತದ ಪ್ರಮುಖ ಇಲಾಖೆಗಳಾದ ಕಂದಾಯ, ಪೊಲೀಸ್ ಹಾಗೂ ಅರಣ್ಯ ಇಲಾಖೆಗಳು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ. ಈ ಪ್ರದೇಶದ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಯಾವುದೇ ರೀತಿಯ ಜವಾಬ್ದಾರಿ ವಹಿಸದೆ ಮೌನವಾಗಿವೆ ಎಂದು ದೂರಿದ್ದಾರೆ.

ಪ್ರವಾಸಿಗರು ಈ ಜಿಲ್ಲೆಯ ಸುಂದರ ತಾಣಗಳನ್ನು ನೋಡಲು ಆಗಮಿಸುವುದಕ್ಕೆ ಯಾರದೇ ಆಕ್ಷೇಪವಿಲ್ಲ. ಆದರೆ ಅಲ್ಲಿ ಪ್ರವಾಸಿ ದಂಡು ಬಂದು ಮೋಜು-ಮಸ್ತಿ ಮಾಡುತ್ತಾ ಮದ್ಯದ ಸೀಸೆ ಹಾಗೂ ಪ್ಲಾಸ್ಟಿಕ್ ಬಾಟಲಿ ಮತ್ತು ಇನ್ನಿತರೆ ತ್ಯಾಜ್ಯಗಳನ್ನು ಅಗಾಧ ಪ್ರಮಾಣದಲ್ಲಿ ಬಿಸಾಡಿ ಹೋಗುತ್ತಿರುವುದು ಆ ಪ್ರದೇಶದ ಸೂಕ್ಷ್ಮ ಪರಿಸರವನ್ನು ಹಾಳುಗೆಡವುತ್ತಿದೆಯಲ್ಲದೆ, ಶುದ್ಧ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ ಇದಕ್ಕೆ ಕಡಿವಾಣ ಹಾಕಲೇ ಬೇಕಿದೆ ಎಂದು ಒತ್ತಾಯಿಸಲಾಗಿದೆ.

ಈ ಎಲ್ಲಾ ಪ್ರವಾಸಿಧಾಮಗಳ ಸುತ್ತಲೂ ಬಹಳಷ್ಟು ಹೋಂಸ್ಟೆ ಹಾಗೂ ರೆಸಾರ್ಟ್‌ಗಳು ಯಾವುದೇ ರೀತಿಯ ಅನುಮತಿಯನ್ನು ಪಡೆಯದೆ ತಲೆಯೆತ್ತಿವೆ. ಜಿಲ್ಲಾಡಳಿತ ವಿಧಿಸುವ ಯಾವ ನಿಯಮ, ನಿಬಂಧನೆಗಳನ್ನು ಪಾಲಿಸುತ್ತಿಲ್ಲವೆಂಬ ಆರೋಪವೂ ಇದೆ.

ಈ ಹೋಂ ಸ್ಟೆ ಹಾಗೂ ರೆಸಾರ್ಟ್‌ಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿ ಸಹ ಜವಾಬ್ದಾರಿಯುತವಾಗಿ ಹಾಗೂ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಇವುಗಳ ನಿಯಂತ್ರಣದ ಬಗ್ಗೆ ಜಿಲ್ಲಾಡಳಿತ ತಕ್ಷಣ ಕ್ರಮಕ್ಕೆ ಮುಂದಾಗಿ ವ್ಯವಸ್ಥಿತಗೊಳಿಸಬೇಕಾಗಿದೆ ಎಂದು ಆಗ್ರಹಿಸಲಾಗಿದೆ.

ಅತಿ ಸೂಕ್ಷ್ಮವಲ್ಲದ ಪ್ರದೇಶವನ್ನು ಗುರುತಿಸಿ ಅಲ್ಲಿ ವಾಹನ ನಿಲುಗಡೆ ಮಾಡಿ, ಪ್ರವಾಸಿಗರಿಗೆ ಅಗತ್ಯವಾದ ಕೆಲವು ಸೌಲಭ್ಯಗಳನ್ನು ಒದಗಿಸಿ, ಸರ್ಕಾರಿ ನಿಯಂತ್ರಣದಲ್ಲಿ ಖಾಸಗಿ ಅಥವಾ ಸರ್ಕಾರಿ ವಾಹನಗಳು ಒಟ್ಟಾಗಿ ಪ್ರವಾಸಿಗರನ್ನು ಕರೆದೊಯ್ಯುವ ವ್ಯವಸ್ಥೆ ಮಾಡುವುದು ಅತ್ಯಂತ ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ಸಲಹೆ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು