News Karnataka Kannada
Saturday, April 13 2024
Cricket
ಉತ್ತರಕನ್ನಡ

ಗಾನ- ಸಂಭ್ರಮದಲ್ಲಿ ಪ್ರವೀಣ್ ಗೋಡ್ಖಿಂಡಿ ಕೊಳಲು ವಾದನ

Praveen Godkhindi plays flute in gaana-sambhrama
Photo Credit : News Kannada

ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಸಂಘಟನಾ ಚಾತುರ್ಮಾಸ್ಯದ ಸಂದರ್ಭದಲ್ಲಿ ಈ ತಿಂಗಳ 12ರಂದು ಖ್ಯಾತ ಬಾನ್ಸುರಿ ವಾದಕ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರ ಕೊಳಲು ವಾದನ ಕಾರ್ಯಕ್ರಮ ಆಯೋಜಿಸಲಾಗಿದೆ.

ಸ್ಪಿಕ್ ಮೆಕೆ ವತಿಯಿಂದ ಅಶೋಕೆ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಮೊಟ್ಟಮೊದಲ ಬಾರಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಪಂಡಿತ್ ರವೀಂದ್ರ ಯಾವಗಲ್ ತಬಲಾದಲ್ಲಿ ಸಾಥ್ ನೀಡಲಿದ್ದಾರೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪಿಕ್ ಮೆಕೆ ಬಗ್ಗೆ: ಐಐಟಿ-ದೆಹಲಿಯ ವಿಶ್ರಾಂತ ಪ್ರೊಫೆಸರ್ ಡಾ.ಕಿರಣ್ ಸೇಠ್ 1977ರಲ್ಲಿ ಆರಂಭಿಸಿದ ಸ್ಪಿಕ್ ಮೆಕೆ (ಸೊಸೈಟಿ ಫಾರ್ ದ ಪ್ರಮೋಶನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ಕಲ್ಚರ್ ಅಮಂಗಸ್ಟ್ ಯೂತ್), ದೇಶಾದ್ಯಂತ ಶಾಸ್ತ್ರೀಯ ಸಂಗೀತದ ಘಮವನ್ನು ಪಸರಿಸುವಲ್ಲಿ ಐದು ದಶಕಗಳಿಂದ ನಿರತವಾಗಿದೆ.

ಭಾರತೀಯ ಪರಂಪರೆಯ ವಿಭಿನ್ನ ಆಯಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಅದರಲ್ಲಿ ಅಡಕವಾಗಿರುವ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಔಪಚಾರಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಗುರಿಯೊಂದಿಗೆ ದೇಶದ ಉದ್ದಗಲಕ್ಕೂ ಪ್ರತಿ ವರ್ಷ ಸುಮಾರು 30 ಲಕ್ಷ ವಿದ್ಯಾರ್ಥಿಗಳನ್ನು ತಲುಪುತ್ತಿದೆ. ದೇಶದ 1000 ನಗರಗಳ 1500ಕ್ಕೂ ಹೆಚು ಸಂಸ್ಥೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜಿಸುತ್ತಾ ಬಂದಿರುವ ಹೆಗ್ಗಳಿಕೆಯನ್ನು ಸ್ಪಿಕ್ ಮೆಕೆ ಹೊಂದಿದೆ.

ಭಾರತ ಹಾಗೂ ವಿಶ್ವ ಪರಂಪರೆಯ ಶ್ರೀಮಂತ ಹಾಗೂ ಬಹುಮುಖಿ ಸಾಂಸ್ಕೃತಿಕ ಹೊಳಹುಗಳ ಮೂಲಕ ಯುವಕರನ್ನು ಪ್ರೇರೇಪಿಸುವುದು ಮತ್ತು ಈ ಮೂಲಕ ಕಲಾಪ್ರಕಾರಗಳು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಲು ನೆರವಾಗುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ದೇಶದ ಶಾಸ್ತ್ರೀಯ ಸಂಗೀತ, ನೃತ್ಯ, ಜಾನಪದ, ಗಮಕ, ರಂಗಕಲೆ, ಚಿತ್ರಕಲೆ, ಕಸೂಲಿ ಹಾಗೂ ಯೋಗ ಪ್ರಕಾರಗಳ ದಿಗ್ಗಜರು ಶಾಲೆ- ಕಾಲೇಜುಗಳಿಗೆ ತೆರಳಿ ಮಕ್ಕಳಿಗಾಗಿ ಕಲಾಸೇವೆ ಮಾಡುವ ಮೂಲಕ ಈ ಅಭಿಯಾನ ಮುನ್ನಡೆಸುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ವಿದ್ಯಾರ್ಥಿಗಳು, ಶಿಕ್ಷಕರು, ಗೃಹಿಣಿಯರು, ನಿವೃತ್ತರು, ವೃತ್ತಿಪರರು, ಯುವಕರು, ವೃದ್ಧರು ಹೀಗೆ ನಿಷ್ಕಾಮ ಸೇವೆಯ ಮನೋಭಾವ ಹೊಂದಿದ ಲಕ್ಷಾಂತರ ಕಾರ್ಯಕರ್ತರು ಈ ಸಂಸ್ಕøತಿಯ ರಾಯಭಾರಿಗಳಾಗಿ ಈ ಕಲಾ ಚಳವಳಿ ಮುನ್ನಡೆಸುತ್ತಿದ್ದಾರೆ.

ಪ್ರವೀಣ್ ಗೋಡ್ಖಿಂಡಿ ಬಗ್ಗೆ: ಶಾಸ್ತ್ರೀಯ ಹಿಂದೂಸ್ತಾನಿ ಕೊಳಲು (ಬಾನ್ಸುರಿ) ಕಲಾವಿದರಾದ ಪ್ರವೀಣ್ ಗೋಡ್ಖಿಂಡಿ ಈ ಕ್ಷೇತ್ರ ಮೇರು ಕಲಾವಿದರಲ್ಲೊಬ್ಬರು. ಕೊಳಲು ವಾದನದ ತಂತ್ರಕಾರಿ ಮತ್ತು ಗಾಯಕಿ ಶೈಲಿ ಹೀಗೆ ಎರಡರಲ್ಲೂ ನಿಷ್ಣಾತರು. ದೇಶ ವಿದೇಶಗಳಲ್ಲಿ ಮನ್ನಣೆ ಗಳಿಸಿದ ಇವರು ಮಾಂತ್ರಿಕ ವಾದನದ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಬಲ್ಲರು. ಎಂಟು ಅಡಿ ಉದ್ದದ ಕೊಳಲು ವಾದನ ಪ್ರಸ್ತುತಪಡಿಸುವ ಮೊದಲ ಭಾರತೀಯ ಕಲಾವಿದ ಎಂಬ ಹೆಗ್ಗಳಿಕೆ ಇವರದ್ದು. ದೇಶದ ಅಗ್ರ ಕೊಳಲು ವಾದಕ ಎಂದು ಆಕಾಶವಾಣಿ ಇವರನ್ನು ಗುರುತಿಸಿದ್ದು, ಅರ್ಜೆಂಟೀನಾದಲ್ಲಿ ನಡೆದ ವಿಶ್ವ ಕೊಳಲು ಹಬ್ಬದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊಟ್ಟಮೊದಲ ಕಲಾವಿದ. ಇವರ ಬೇರು ಹಾಗೂ ವಿಮುಕ್ತಿ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಸಂದಿದ್ದು, ಮೂರನೇ ವಯಸ್ಸಿನಿಂದಲೇ ಕೊಳಲಿನ ಗೀಳು ಮೂಡಿಸಿಕೊಂಡವರು. ಆರನೇ ವಯಸ್ಸಿನಲ್ಲೇ ಸಾರ್ವಜನಿಕ ಕಾರ್ಯಕ್ರಮ ನೀಡಿ ಅಚ್ಚರಿ ಮೂಡಿಸಿದ್ದರು. ಪಂಡಿತ್ ವೆಂಕಟೇಶ ಗೋಡ್ಖಿಂಡಿ ಮತ್ತು ವಿದ್ವಾನ್ ಅನೂರ್ ಅನಂತ ಕೃಷ್ಣ ಶರ್ಮಾ ಅವರಲ್ಲಿ ಕಲಾಭ್ಯಾಸ ಮಾಡಿದ ಇವರು, ಸುರ್‍ಮಾನಿ, ನಾದ ನಿಧಿ, ಸುರ್ ಸಾಮ್ರಾಟ್, ಕಲಾಪ್ರವೀಣ, ಆರ್ಯಭಟ್ಟ, ಉಡುಪಿ ಶ್ರೀಕೃಷ್ಣ ಮಠದ ಆಸ್ಥಾನ ಸಂಗೀತ ವಿದ್ವಾನ್ ಹೀಗೆ ಹತ್ತು ಹಲವು ಪ್ರಶಸ್ತಿ ಗೌರವಗಳು ಇವರನ್ನು ಅರಸಿಕೊಂಡು ಬಂದಿವೆ.

ಕಲಾ ಸೇವೆಯ ಜತೆಜತೆಗೇ ಶೈಕ್ಷಣಿಕ ರಂಗದಲ್ಲೂ ಸಾಧನೆ ಮಾಡಿದ ಇವರು ಧಾರವಾಡದ ಎಸ್‍ಡಿಎಂ ಎಂಜಿನಿಯರಿಂಗ್ ಕಾಲೇಜಿನಿಂದ ವಿಶಿಷ್ಟ ಶ್ರೇಣಿಯೊಂದಿಗೆ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಉಸ್ತಾದ್ ಜಾಕೀರ್ ಹುಸೇನ್, ಡಾ.ಬಾಲಮುರಳಿ ಕೃಷ್ಣ, ಪಂಡಿತ್ ವಿಶ್ವಮೋಹನ ಭಟ್, ಡಾ.ಕದ್ರಿ ಗೋಪಾಲನಾಥ್ ಮತ್ತು ಶಿವಮಣಿಯವರಂಥ ಮೇರು ಕಲಾವಿದರ ಜತೆ ಕಾರ್ಯಕ್ರಮ ನೀಡಿದ್ದಾರೆ. ಯೂಟ್ಯೂಬ್‍ನಲ್ಲಿ 101 ರಾಗಗಳನ್ನೂ ಒಳಗೊಳ್ಳುವ ರಾಗಟೈನ್‍ಮೆಂಟ್ ಆರಂಭಿಸಿದ ಹೆಗ್ಗಳಿಕೆಯೂ ಇವರದ್ದು.

ರವೀಂದ್ರ ಯಾವಗಲ್: ಧಾರವಾಡ ಮೂಲದ ಪಂಡಿತ್ ರವೀಂದ್ರ ಯಾವಗಲ್ ಅವರಿಗೆ ತಬಲಾ ತಂದೆ ರಾಮಚಂದ್ರ ಅವರಿಂದ ಬಂದ ಬಳುವಳಿ. ಕುಟುಂಬದ ವಿರೋಧ ಇದ್ದರೂ ಚಿಕ್ಕಂದಿನಿಂದಲೇ ತಬಲಾವನ್ನೇ ಉಸಿರಾಗಿಸಿಕೊಂಡವರು. ನಾಲ್ಕನೇ ವಯಸ್ಸಿನಿಂದಲೇ ತಂದೆಯಿಂದ ಮೃದಂಗ ಕಲಿಕೆ ಆರಂಭಿಸಿದ ಇವರು ಬಳಿಕ ವೀರಣ್ಣ ಕಾಮಕರ ಹಾಗೂ ಶೇಷಗಿರಿ ಹಾನಗಲ್ ಅವರಿಂದ ವಿಶೇಷ ತರಬೇತಿ ಪಡೆದರು. ಲಾಲ್‍ಜಿ ಗೋಖಲೆ ಕೂಡಾ ಯಾವಗಲ್ ಅವರಿಗೆ ಮಾರ್ಗದರ್ಶನ ನೀಡಿದರು.

ಕುಂದಗೋಳದಲ್ಲಿ ಸವಾಯಿ ಗಂಧರ್ವ ಸಂಗೀತೋತ್ಸವದಲ್ಲಿ 10ನೇ ವಯಸ್ಸಿನಲ್ಲೇ ಕಾರ್ಯಕ್ರಮ ನೀಡಿದ ಅವರು ದೇಶ ವಿದೇಶಗಳಲ್ಲಿ ಸಾವಿರಾರು ಮಂದಿ ಸಂಗೀತ ರಸಿಕರ ಮನ ಸೂರೆಗೊಂಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು