ಕಾರವಾರ: ಇಲ್ಲಿನ ರೋಟರಿ ಕ್ಲಬ್ ಪಶ್ಚಿಮ ವತಿಯಿಂದ ಜ.29 ರಂದು ‘ವಾಕ್ ಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ನಡಿಗೆ ಸ್ಪರ್ಧೆಗಳನ್ನು ನಡೆಸಲಾಗುತ್ತದೆ ಎಂದು ಕ್ಲಬ್ ಅಧ್ಯಕ್ಷ ಪ್ರಕಾಶ ರೇವಣಕರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಾರವಾರ ಮಾತ್ರವಲ್ಲದೇ ಬೇರೆ ಪ್ರದೇಶದ ಉತ್ಸಾಹಿಗಳೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಟ್ಟಾರೆಯಾಗಿ 70 ಸಾವಿರ ರೂ. ಗಳ ಬಹುಮಾನವನ್ನು ವಿಜೇತರಿಗೆ ವಿತರಿಸಲಾಗುತ್ತದೆ. ಅಂದು ಬೆಳಿಗ್ಗೆ 6.30ಕ್ಕೆ ಈ ಸ್ಪರ್ಧೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ನಗರದ ಮಾಲಾದೇವಿ ಮೈದಾನದಲ್ಲಿ ಚಾಲನೆ ದೊರೆತು ಅಲ್ಲಿಂದ ಕಾಳಿ ರಿವರ್ ಗಾರ್ಡನ್ ಬಳಿಯಿಂದ ಬಾಂಡಿಶಿಟ್ಟಾ ಮಾರ್ಗವಾಗಿ ಪುನಃ ಮಾಲಾದೇವಿ ಮೈದಾನದಲ್ಲಿ ಕೊನೆಗೊಳ್ಳಲಿದೆ. ಮಕ್ಕಳಿಗೆ ಹಾಗೂ ಹಿರಿಯರಿಗೆ 5 ಕಿ.ಮೀ. ಹಾಗೂ ಯುವಕ-ಯುವತಿಯರಿಗೆ 10 ಕಿ.ಮೀ. ನಡಿಗೆ ಸ್ಪರ್ಧೆಗಳು ನಡೆಯಲಿವೆ. ಸುಮಾರು 500ಕ್ಕೂ ಹೆಚ್ಚು ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಇನ್ನು ಈ ಕಾರ್ಯಕ್ರಮದಿಂದ ಉಳಿಕೆಯಾಗುವ ಹಣದಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ: 9890513796, 9611202822, 9902301329 ಸಂಖ್ಯೆಗೆ ಕರೆ ಮಾಡುವಂತೆ ಅವರು ಕೋರಿದ್ದಾರೆ. ಈ ಸಂದರ್ಭದಲ್ಲಿ ಕ್ಲಬ್ ಪ್ರಮುಖರಾದ ರಾಜು ಪಾಟೀಲ್, ಪಲ್ಲವಿ ಡಿಸೋಜಾ, ಮೆಹಬೂಬ್ ಸೈಯದ್, ತ್ರಿಶಾ ಪೆಡ್ನೇಕರ, ಅಂಕುರ ಪೆಡ್ನೇಕರ ಇದ್ದರು.