News Karnataka Kannada
Monday, May 06 2024
ಉತ್ತರಕನ್ನಡ

ಗೋಕರ್ಣ: ಅಖಂಡ ಭಾರತದ ನೈಜ ಸ್ವಾತಂತ್ರ್ಯಕ್ಕೆ ಸಂಕಲ್ಪ ಎಂದ ರಾಘವೇಶ್ವರ ಸ್ವಾಮೀಜಿ

Problems, challenges are life's opportunities, says Raghaveshwara Sri
Photo Credit : By Author

ಗೋಕರ್ಣ: ಭಾರತೀಯ ಸಂಸ್ಕತಿಯ ಮಕ್ಕಳೆಲ್ಲರೂ ನಮ್ಮ ಮೂಲ ಸಂಸ್ಕತಿಗೆ ಮರಳುವಂತಾಗಬೇಕು ಮತ್ತು ಹಿಂದೆ ಭಾರತದ ಭೂಭಾಗವೇ ಆಗಿದ್ದ ಎಲ್ಲ ಪ್ರದೇಶಗಳು ಮತ್ತೆ ಭಾರತ ಸಂಸ್ಕತಿಗೆ ಮರಳಬೇಕು. ಆಗ ನಿಜವಾಗಿ ಭಾರತಕ್ಕೆ ಸ್ವಾತಂತ್ರ್ಯ ಬರುತ್ತದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಈ ಸಂಕಲ್ಪ ಸಾಕಾರವಾಗಿಸುವ ಪಣ ತೊಡೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಕರೆ ನೀಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ವಿದೇಶಿಯರ ಆಳ್ವಿಕೆಯಿಂದ ಮುಕ್ತಿ ಪಡೆದ ದಿನವನ್ನು ನಾವು ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತಿದ್ದೇವೆ. ಆದರೆ ಆಹಾರ- ವಿಹಾರ, ಉಡುಗೆ ತೊಡುಗೆ, ಆಚಾರ- ವಿಚಾರ, ಸಂಸ್ಕøತಿ- ಸಂಪ್ರದಾಯ ಎಲ್ಲದರಲ್ಲೂ ವಿದೇಶಿಯರ ಮಾನಸ ಪುತ್ರರಾಗಿಯೇ ಉಳಿದಿದ್ದೇವೆ. ಆ ಸಂಕೋಲೆ ಕಳಚಿಕೊಂಡು ಎಲ್ಲೆಡೆ ಭಾರತೀಯತೆ ವಿಜೃಂಭಿಸುವುದೇ ನೈಜ ಸ್ವಾತಂತ್ರ್ಯ ಎಂದು ವಿಶ್ಲೇಷಿಸಿದರು.

ಭಾರತಕ್ಕೆ ಪರಿಪೂರ್ಣ ಸ್ವಾತಂತ್ರ್ಯ ಇನ್ನೂ ಬಂದಿಲ್ಲ. ಎಲ್ಲಿ ತನ್ನತನಕ್ಕೆ ಪ್ರಾಶಸ್ತ್ಯ, ಪ್ರಾಧಾನ್ಯ ಇದೆಯೋ ಅದು ನಿಜವಾದ ಸ್ವಾತಂತ್ರ್ಯ. ಆಂಥ ನಮ್ಮತನ ಮತ್ತೆ ಮೆರೆಯುವಂತೆ ಮಾಡುವುದೇ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮೂಲೋದ್ದೇಶ ಎಂದು ಸ್ಪಷ್ಟಪಡಿಸಿದರು.

ನಮ್ಮ ವೈಯಕ್ತಿಕ ಬದುಕಿನಲ್ಲಿ ಭಾರತೀಯತೆ ಬರಬೇಕು. ಮನೆ, ಸಮಾಜ, ರಾಜ್ಯ, ರಾಷ್ಟ್ರ ಎಲ್ಲವೂ ಭಾರತೀಯತೆಯನ್ನು ಅಳವಡಿಸಿಕೊಳ್ಳಬೇಕು. ಭಾರತಕ್ಕೆ ದೊಡ್ಡ ಶಕ್ತಿ ಬರುತ್ತದೆ. ಸುತ್ತಮುತ್ತಲಿನ ದೇಶಗಳು ಸಹಜವಾಗಿಯೇ ಆಗ ಭಾರತಕ್ಕೆ ಸೇರಿಕೊಳ್ಳುತ್ತಿವೆ. ಈ ಪುಣ್ಯ ಧರಿತ್ರಿಯಲ್ಲಿ ಅದಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸೋಣ. ಇಲ್ಲಿ ಹುಟ್ಟಿದ ಬಹಳಷ್ಟು ಮಂದಿ ಮಹಾಪುರಷರಿಗೆ, ಅವತಾರ ಪುರುಷರಿಗೆ ಜನ್ಮ ನೀಡಿದ ಭೂಮಿ. ಕ್ರಿಸ್ತ, ಪೈಗಂಬರ್ ಹುಟ್ಟಿದ ಸ್ಥಳಗಳಿವೆ. ಅವರೆಲ್ಲ ದೇವದೂತರು. ದೇವದೂತರು ಹುಟ್ಟಿಬಂದ ಪ್ರದೇಶ ವಿಶ್ವದ ಹಲವು ಕಡೆಗಳಲ್ಲಿದ್ದರೆ ದೇವರೇ ಹುಟ್ಟಿಬಂದ ಪ್ರದೇಶ ಭಾರತವನ್ನು ಬಿಟ್ಟರೆ ಬೇರೆಲ್ಲೂ ಇಲ್ಲ. ಉದಾಹರಣೆಗೆ ರಾಮನ ಜನ್ಮಸ್ಥಾನವಾದ ಅಯೋಧ್ಯೆ,  ಕೃಷ್ಣ ಅವತಾರವೆತ್ತಿದ ಮಥುರೆ, ಶಿವನೇ ಶಂಕರಾಚಾರ್ಯರಾಗಿ ಜನ್ಮ ತಾಳಿದ ಕಾಲಡಿ ಹೀಗೆ ಅನೇಕ ಪ್ರದೇಶಗಳಿವೆ. ಭರತ ದೇಶ ಎನ್ನುವುದು ದೇವಗರ್ಭ. ಅಂಥ ಮಣ್ಣು ಇದು. ಅದು ನಮಗೆ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡೋಣ ಎಂದರು.

ಭೌಗೋಳಿಕವಾಗಿ ನೋಡಿದರೆ ಕೂಡಾ ಭಾರತಕ್ಕೆ ಪರಿಪೂರ್ಣ ಸ್ವಾತಂತ್ರ್ಯ ಬಂದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಭಾರತ ಎಂದು ನಾವು ಹೇಳುತ್ತೇವೆ. ಆದರೆ ಕಾಶ್ಮೀರದ ಅರ್ಧಭಾಗ ನಮ್ಮ ವಶದಲ್ಲಿದೆ. ಅದು ಪಾಕ್ ಆಕ್ರಮಿತ ಕಾಶ್ಮೀರ. ಪಾಕಿಸ್ತಾನ ಕೂಡಾ ಭಾರತದ ಅಂಗವೇ ಆಗಿತ್ತು. ಪಾಕಿಸ್ತಾನದಿಂದ ಪ್ರತ್ಯೇಕಗೊಂಡ ಇನ್ನೊಂದು ಭಾಗ ಬಾಂಗ್ಲಾದೇಶ. ಇದು ಕೂಡಾ ಭಾರತವೇ. ಬರ್ಮಾ, ಶ್ರೀಲಂಕಾ, ಅಫ್ಘಾನಿಸ್ತಾನ ಕೂಡಾ ಭಾರತದ ಭಾಗವೇ ಆಗಿದೆ ಎಂದು ಪ್ರತಿಪಾದಿಸಿದರು.

ಶ್ರೀಲಂಕಾ ಇಲ್ಲದೇ ರಾಮಾಯಣದ ಕಥೆ ಪೂರ್ಣವಾಗುವುದಿಲ್ಲ. ಅದು ಭಾರತದ ಅವಿಭಾಜ್ಯ ಅಂಗ. ಶ್ರೀಲಂಕಾ ಎಂಬ ಪದ ಶುದ್ಧ ಸಂಸ್ಕøತ ಪದ. ಅಫ್ಘಾನಿಸ್ತಾನವನ್ನು ಉದಾಹರಣೆಗೆ ತೆಗೆದುಕೊಂಡರೆ ಕಂದಹಾರ ಪ್ರದೇಶ. ಅದು ನೈಜವಾಗಿ ಗಾಂಧಾರ ಮಹಾಭಾರತದಲ್ಲಿ ಉಲ್ಲೇಖ ಇರುವಂತೆ ಗಾಂಧಾರ ದೇಶ; ಗಾಂಧಾರಿಯ ತವರು ಮನೆ. ತ್ರಿಬಿಷ್ಟಪ ಎನ್ನುವುದು ಟಿಬೆಟ್‍ನ ಮೂಲ ಹೆಸರು. ತ್ರಿಬಿಷ್ಟಪ ಎಂದರೆ ಸ್ವರ್ಗ, ದೇವಭೂಮಿ ಎಂಬ ಅರ್ಥ. ಬ್ರಹ್ಮದೇಶ ಬರ್ಮಾ ಆಯಿತು. ಭೂ ಉತ್ಥಾನ ಭೂತಾನ ಎಂದಾಯಿತು. ಹೀಗೆ ಭಾರತದ ಎಲ್ಲ ನೆರೆ ಹೊರೆಯ ದೇಶಗಳೂ ಭಾರತದ ಭಾಗವೇ ಆಗಿದ್ದವು ಎಂದು ಹೇಳಿದರು.

ಟರ್ಕಿಗೂ ಭಾರತಕ್ಕೂ ಇಂದು ಯಾವ ಸಂಬಂಧವೂ ಇಲ್ಲ. ಆದರೆ ಮೊದಲು ಭಾರತೀಯರು ಇಲ್ಲಿನ ಜನರನ್ನು ತುರ್ಕಿಗಳು ಎಂದು ಕರೆಯುತ್ತಿದ್ದರು. ತುರ್ಕಿ ಎನ್ನುವ ಮೂಲ ಹೆಸರು ತುರಗ ಎಂದು. ಶ್ರೇಷ್ಠ ಕುದುರೆಗಳು ದೊರೆಯುವ ಸ್ಥಳ ತುರ್ಗ ಸ್ಥಾನ ಇದು ಇಂದು ಟರ್ಕಿ ಎಂದಾಗಿದೆ ಎಂದರು.

ಮಯಯ ದೇಶ ಮಲೇಷ್ಯಾ, ಶ್ಯಾಮದೇಶ ಥಾಯ್ಲೆಂಡ್ ಆಗಿದೆ. ಕಾಂಬೋಜ, ಕಂಬೋಡಿಯಾ ಆಗಿದೆ. ಚಂಪಾ ದೇಶ ಚಾಪ್ ಬಳಿಕ ವಿಯೇಟ್ನಾಂ ಎಂದಾಗಿದೆ. ಋಷಕ ದೇಶ ರಷ್ಯಾ ಆಯಿತು. ಚೀನಾ ಹಾಗೂ ಪರಮ ಚೀನಾದ ಉಲ್ಲೇಖ ರಾಮಾಯಣದಲ್ಲಿದೆ. ಸಿರಿಯಾ ಮತ್ತು ಅಸಿರಿಯಾ ಎಂಬ ಹೆಸರು ಸುರ- ಅಸುರ ಎಂಬ ಪದದ ಮೂಲದ್ದು. ಮೆಡಿಟರೇನಿಯನ್, ಮಧ್ಯ ಥರಾ ಎಂಬ ಸಂಸ್ಕøತ ಶಬ್ದ. ಬಳಿಕ ಅಪಭ್ರಂಶಗೊಂಡು ಮೆಡಿಟರೇನಿಯನ್ ಆಗಿದೆ ಎಂದು ಅಭಿಪ್ರಾಯಪಟ್ಟರು.

ಇರಾಕ್‍ನ ಬಲ್ಕ್ ಎಂಬ ಪಟ್ಟಣ ಬಾಹಲಿಕಾ ಎಂಬ ಉಲ್ಲೇಖ ಮಹಾಭಾರತದಲಿದೆ. ಅಲ್ಲಿ ಉತ್ಖನನ ಮಾಡಿದರೆ ಇಂದಿಗೂ ಶಿವಲಿಂಗ ಸಿಗುತ್ತದೆ. ರಷ್ಯಾದ ಭಾಗವಾದ ಸೈಬೀರಿಯಾದಲ್ಲಿ ಜನ ಇಂದಿಗೂ ಶಿಬಿರಗಳಲ್ಲಿ ವಾಸ ಮಾಡುತ್ತಾರೆ. ಶಿಬಿರ ಎಂಬ ಶಬ್ದದಿಂದ ಸೈಬೀರಿಯಾ ಬಂದಿದೆ. ಯಾವದ್ವೀಪ ಜಾವಾ ಆಗಿದೆ. ರಾಮಾಯಣದ ವಾಲಿಯ ನೆನಪಿನ ದ್ವೀಪ ಇಂದು ಬಾಲಿ ದ್ವೀಪವಾಗಿದೆ. ಇದು ಇಂಡೋನೇಷ್ಯಾದ ಭಾಗ. ಹಿಂದೂಗಳು ಬಹಳ ಸಂಖ್ಯೆಯಲ್ಲಿದ್ದಾರೆ. ನೇಪಾಳ ಜನಕಪುರಿ. ಇಲ್ಲಿ ಇಂದಿಗೂ ಹಿಂದೂಸಂಸ್ಕøತಿ ಇದೆ ಎಂದು ಬಣ್ಣಿಸಿದರು.

ರಾಜಾ ಶ್ರೀ ಶ್ರೀತ್ರಿಭುವನ ಸ್ಥಾಪನೆ ಮಾಡಿದ ಊರು ಸಿಂಹಪುರ; ಇಂದು ಸಿಂಗಾಪುರ ಆಗಿದೆ. ದಕ್ಷಿಣ ಆಫ್ರಿಕಾದ ಮಾಲಿ ಹಾಗೂ ಸಂಬಾಲಿ ಎಂಬ ಊರುಗಳಿವೆ. ಇದು ರಾವಣನ ತಾಯಿಯ ಊರು. ಭರತಖಂಡದ ವ್ಯಾಪ್ತಿ ಅಷ್ಟು ವಿಸ್ತಾರವಾಗಿತ್ತು. ಆದರೆ ಪುಟ್ಟ ಭೂಭಾಗವನ್ನೇ ನಾವು ಸ್ವತಂತ್ರ ಭಾರತ ಎಂದು ಹೇಳುತ್ತಿದ್ದೇವೆ. ಆ ದೇಶಗಳ ಜನರಿಗೆ ತಮ್ಮ ಇತಿಹಾಸದ ಅರಿವಿಲ್ಲ. ಭಾರತಕ್ಕೂ ಈ ಭಾಗಕ್ಕೂ ಯಾವ ಸಂಬಂಧವೂ ಇಂದು ಉಳಿದುಕೊಂಡಿಲ್ಲ ಎಂದು ವಿಷಾದಿಸಿದರು.

ಈ ಎಲ್ಲ ಭೂಪ್ರದೇಶಗಳು ಭಾರತವೇ ಆದಾಗ ಮಾತ್ರ ನೈಜ ಸ್ವಾತಂತ್ರ್ಯ ಬಂದಂತಾಗುತ್ತದೆ. ಈ ಎಲ್ಲ ದೇಶಗಳ ಮೂಲಸಂಸ್ಕತಿ ಭಾರತೀಯ ಸಂಸ್ಕøತಿ. ಕೆಲವೆಡೆ ಅಲ್ಪಸ್ವಲ್ಪ ಉಳಿದುಕೊಂಡಿದೆ. ಭಾರತೀಯ ಸಂಸ್ಕøತಿಯ ಮಕ್ಕಳೆಲ್ಲರೂ ನಮ್ಮ ಮೂಲ ಸಂಸ್ಕøತಿಗೆ ಮರಳಬೇಕು ಎಂಬ ಸಂಕಲ್ಪವನ್ನು ತೊಡುವಂತಾಗಬೇಕು ಎಂದರು.

ಹಿಂದೆಯೂ ಹಿರಣ್ಯಕಶುಪು, ರಾವಣ, ಕಂಸ, ರಾಜ್ಯವಾಳಿದ ಉಲ್ಲೇಖ ಪುರಾಣಗಳಲ್ಲೂ ಇದೆ. ಇದೀಗ ಅಂಥ ವಾತಾವರಣ ಕಂಡುಬರುತ್ತಿದೆ. ಮುಂದೊಂದು ದಿನ ಇವೆಲ್ಲ ಮತ್ತೆ ಭಾರತೀಯ ಸಂಸ್ಕøತಿಗೆ ಮರಳುವ ಕನಸು ಕಾಣುವ, ಸಂಕಲ್ಪ ತೊಡುವ ದಿನವನ್ನಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸೋಣ ಎಂದು ಕರೆ ನೀಡಿದರು.

ಶ್ರೀಮಠದ ಸಾಮಾಜಿಕ ಜಾಲತಾಣಿಗರ ಬಳಗದ ವತಿಯಿಂದ ಸೋಮವಾರ ಸರ್ವಸೇವೆ ನಡೆಯಿತು. ಕುಮಟಾಕ್ಕೆ ಹೊಸದಾಗಿ ಆಗಮಿಸಿದ ಎಸಿ ಆರ್.ಬಿ.ಜಗಳಸರ್ ಶ್ರೀಗಳಿಂದ ಆಶೀರ್ವಾದ ಪಡೆದರು. ತಹಶೀಲ್ದಾರ್ ಅಶೋಕ್ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ 108 ತೆಂಗಿನಕಾಯಿಗಳ ಗಣಹವನ, ಸಾಂಸ್ಕತಿಕ ಕಾರ್ಯಕ್ರಮದಲ್ಲಿ ರೇಷ್ಮಾ ಭಟ್ ಮತ್ತು ರಮ್ಯಾ ಭಟ್ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು