ಉಡುಪಿ: ಇತ್ತೀಚೆಗೆ ಮಾಜಿ ಸಚಿವ ಹೆಚ್ ಆಂಜನೇಯ ಅಯೋಧ್ಯೆ ರಾಮ ಮಂದಿರದ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ರಾಮ ಬೇರೆಯಲ್ಲ ಮತ್ತು ಕೃಷ್ಣ ಬೇರೆಯಲ್ಲ. ದೇವರು ಮಂದಿರದಲ್ಲಿ ಮಾತ್ರವಲ್ಲ ಎಲ್ಲರೊಳಗಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಳಗೂ ದೇವರು ಇದ್ದಾನೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ಬಿಜೆಪಿ ಮಂದಿರವೆಂದು ಯಾಕೆ ಹಾಗೆ ಅಂದುಕೊಳ್ಳಬೇಕು? ಎಂದು ಪ್ರಶ್ನಿಸಿದರು. ನಾವು ಭಾರತೀಯರು ರಾಮಮಂದಿರ ಎಲ್ಲರಿಗೂ ಸೇರಿದೆ. ಇದು ಪಕ್ಷದ ಮಂದಿರ ಅಲ್ಲ, ಬಿಜೆಪಿಯವರು ಮಾತ್ರ ದೇಣಿಗೆ ಕೊಟ್ಟಿದ್ದಾರಾ? ಪಕ್ಷ ಹಾಗೂ ಸರ್ಕಾರದ ದೇಣಿಗೆಯಿಂದ ರಾಮಮಂದಿರ ನಿರ್ಮಿಸಿಲ್ಲ. ಜಗತ್ತಿನಲ್ಲಿರುವ ರಾಮ ಭಕ್ತರ ದೇಣಿಗೆಯ ಮೂಲಕ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಹೇಳಿದರು.