ಕುಂದಾಪುರ: ಚಲಿಸುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಕ್ರೇನ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಸಹಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಪಾನಕದಕಟ್ಟೆಯ ಶ್ರೀನಿವಾಸ ಕಾಂಪ್ಲೆಕ್ಸ್ ಬಳಿ ಡಿ.26ರಂದು ಮಧ್ಯಾಹ್ನ 3.15ಕ್ಕೆ ನಡೆದಿದೆ.
ಮೃತನನ್ನು ಸ್ಥಳೀಯ ನಿವಾಸಿ ಪ್ರಶಾಂತ ಮೊಗವೀರ ಎಂದು ಗುರುತಿಸಲಾಗಿದೆ. ಮೃತ ಪ್ರಶಾಂತ್ ಅವರು ದಿನೇಶ್ ಪೂಜಾರಿ ಎಂಬವರ ಬೈಕ್ ನ ಹಿಂಬದಿಯಲ್ಲಿ ಕುಳಿತುಕೊಂಡು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ತೆರಳುತ್ತಿದ್ದರು.
ಈ ವೇಳೆ ಅದೇ ದಿಕ್ಕಿನಲ್ಲಿ ಅಪರಿಚಿತ ಚಾಲಕನೋರ್ವ ನೋಂದಣಿ ಸಂಖ್ಯೆ ಇಲ್ಲದ ಹೊಸ ಕ್ರೇನ್ ಅನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಪ್ರಶಾಂತ್ ಸಹ ಸವಾರನಾಗಿ ಪ್ರಯಾಣಿಸುತ್ತಿದ್ದ ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ.
ಇದರ ಪರಿಣಾಮ ಬೈಕ್ ಸಮೇತ ಇಬ್ಬರು ಸವಾರರು ರಸ್ತೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಸ್ಥಳದಲ್ಲೆ ಉಸಿರು ಚೆಲ್ಲಿದ್ದಾರೆ. ಸವಾರ ದಿನೇಶ್ ಪೂಜಾರಿ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಯಾದಿಂದ ಪಾರಾಗಿದ್ದು, ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರೇನ್ ಅನ್ನು ಸ್ಥಳದಲ್ಲೆ ನಿಲ್ಲಿಸಿದ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.