ಉಡುಪಿ: ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದೆ. ಮಹಿಳೆಯರು ತಮ್ಮ ದಾಖಲೆಗಳನ್ನು ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆದ್ರೆ ವಯಸ್ಸಾದ ಮಹಿಳೆಯರು ಉಚಿತ ಅಂತ ಯಾವುದೇ ದಾಖಲೆ ತಾರದೇ ಬಸ್ಸಿನಲ್ಲಿ ಗೊಂದಲಕ್ಕೀಡಾಗುತ್ತಿದ್ದಾರೆ.
ಅದರಂತೆ ಉಡುಪಿಯಲ್ಲಿ ಅಜ್ಜಿಯೊಬ್ಬರು ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳಲು ದಾಖಲೆ ತಾರದೇ, ಕೈಯಲ್ಲಿ ಹಣವೂ ಇಲ್ಲದೇ ಬಸ್ಸು ನಿಲ್ದಾಣದಲ್ಲಿ ಅಳುತ್ತಾ ಕುಳಿತ್ತಿದ್ದರು. ಬಸ್ ನಿರ್ವಾಹಕರು ದಾಖಲೆ ನೀಡದೇ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ ಅಂತ ಅಜ್ಜಿಗೆ ಪ್ರಯಾಣ ನಿರಾಕರಿಸಿದ್ದರು. ಕೊನೆಗೆ ಬಸ್ಸು ನಿಲ್ದಾಣದಲ್ಲಿ ಇದ್ದವರೊಬ್ಬರು ಮಾನವೀಯತೆ ಮೆರೆದು ಶಿವಮೊಗ್ಗದ ಟಿಕೆಟ್ ಹಣವನ್ನು ತಾವು ನೀಡಿ ಅಜ್ಜಿಯನ್ನು ಶಿವಮೊಗ್ಗಕ್ಕೆ ಕಳುಹಿಸಿದರು.