ಉಡುಪಿ: ಜಿಲ್ಲೆಯಲ್ಲಿ ಗುರುವಾರ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ 379ಕ್ಕೇರಿದೆ. ಇದರಿಂದ ದಿನದಲ್ಲಿ ಸೋಂಕಿಗೆ ಈಗಲೂ ಸಕ್ರಿಯರಾಗಿರುವವರ ಸಂಖ್ಯೆಯೂ 1914ಕ್ಕೇರಿದೆ. ಇಂದು ದಿನದಲ್ಲಿ 90 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಪಾಸಿಟಿವ್ ಬಂದ 379 ಮಂದಿಯಲ್ಲಿ 200 ಮಂದಿ ಪುರುಷ ರಾದರೆ 179 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 282 ಮಂದಿ ಉಡುಪಿ ತಾಲೂಕಿಗೆ ಸೇರಿದವರಾದರೆ ಕುಂದಾಪುರ ತಾಲೂಕಿನ 46 ಮಂದಿ ಹಾಗೂ ಕಾರ್ಕಳ ತಾಲೂಕಿನ 45 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಅಲ್ಲದೇ ಹೊರಜಿಲ್ಲೆಗಳಿಂದ ಬಂದ ಆರು ಮಂದಿಯಲ್ಲೂ ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಸದ್ಯದ ಪಾಸಿಟಿವಿಟಿ ಪ್ರಮಾಣ ಶೇ.5.57ರಲ್ಲಿದೆ.
ಇಂದು ಪಾಸಿಟಿವ್ ಬಂದ 379 ಮಂದಿಯಲ್ಲಿ 20 ಮಂದಿಯನ್ನು ಕೋವಿಡ್ ಕೇರ್ಸೆಂಟರ್ಗೂ, ನಾಲ್ವರನ್ನು ಕೋವಿಡ್ ಆಸ್ಪತ್ರೆಗೂ, ಏಳು ಮಂದಿ ಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿದ್ದು, ಉಳಿದ 348 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ 90 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನ ದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 466ಕ್ಕೇರಿದೆ. ನಿನ್ನೆ ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 3493 ಮಂದಿ, ಕುಂದಾಪುರದಲ್ಲಿ 1840 ಹಾಗೂ ಕಾರ್ಕಳ ತಾಲೂಕಿನ 1367 ಮಂದಿ ಸೇರಿದಂತೆ ಒಟ್ಟು 6700 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 2232ಕ್ಕೇರಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.
800 ಮಂದಿಗೆ ಮುನ್ನೆಚ್ಚರಿಕೆ ಡೋಸ್: ಜಿಲ್ಲೆಯಲ್ಲಿ ಇಂದು ಒಟ್ಟು 800 ಮಂದಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 60 ವರ್ಷಕ್ಕೂ ಮೇಲ್ಪಟ್ಟ 253 ಮಂದಿ ಲಸಿಕೆ ಪಡೆದರೆ, 470 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 77 ಮಂದಿ ಮುಂಚೂಣಿ ಕಾರ್ಯಕರ್ತರು ಸೇರಿದ್ದಾರೆ.
3901 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 3901 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 2005 ಮಂದಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲಾಗಿದೆ. ಒಟ್ಟಾರೆಯಾಗಿ ದಿನದಲ್ಲಿ 2879 ಮಂದಿ ಮೊದಲ ಡೋಸ್ ಹಾಗೂ 1022 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ.ಉಡುಪ ತಿಳಿಸಿದ್ದಾರೆ.