ಉಡುಪಿ : ಮಳೆಗಾಲದಲ್ಲಿ ಕಲ್ಲಿದ್ದಲು ಗಣಿಗಳು ಸ್ಥಗಿತಗೊಂಡಿರುವುದಂದ ಉಷ್ಣವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಕೊರತೆಯಾಗಿದ್ದು ಮೂರ್ನಾಲ್ಕು ದಿನಗಳಲ್ಲೇ ಈ ಸಮಸ್ಯೆ ಬಗೆಹರಿಯಲಿದೆ ಎಂಬುದಾಗಿ ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಲ್ಲಿದ್ದಲು ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನಾ ಕಾರ್ಯಕ್ಕೆ ಸಮಸ್ಯೆಯಾಗಿರುವ ಬಗ್ಗೆ ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು. ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇವೆ, ಅಧಿಕಾರಿಗಳು ಕೂಡ ನಿರಂತರ ಸಂಪರ್ಕದಲ್ಲಿದ್ದು ಶೀಘ್ರದಲ್ಲೇ ಕಲ್ಲಿದ್ದಲು ಪೂರೈಕೆಗೆ ವ್ಯವಸ್ಥೆ ಮಾಡುತ್ತೇವೆ. ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.
ಮಳೆಗಾಲವಾಗಿರುವುದರಿಂದ ದೇಶಾದ್ಯಂತ ಕಲ್ಲಿದ್ದಲು ಗಣಿಗಳು ಸ್ಥಗಿತಗೊಂಡಿವೆ. ಆದ್ದರಿಂದ ಕರ್ನಾಟಕದ ರಾಯಚೂರು ಮತ್ತು ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಪೂರೈಕೆ ಕೊರತೆಯಾಗಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇವೆ. ನಾನು ಬೆಳಗ್ಗೆ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೆ. ರಾತ್ರಿಯೂ ಮಾತನಾಡುತ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿ ಪ್ರವಾಸದಲ್ಲಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದರು.
ಮಹಾರಾಷ್ಟ್ರ ಮತ್ತು ಒಡಿಶಾದಿಂದ ನಮಗೆ ಬರಬೇಕಾದ ಕಲ್ಲಿದ್ದಲು ನೀಡುವಂತೆ ಮನವಿ ಮಾಡಲಾಗಿದೆ. 4 – 5 ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಜನರಿಗೆ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುತ್ತದೆ ಎಂದು ಸುನಿಲ್ ಕುಮಾರ್ ಹೇಳಿದರು.