ಕಾರವಾರ: ಟೋಲ್ ಶುಲ್ಕ ವಿನಾಯಿತಿ, ಕೆಲವೆಡೆ ಅಂಡರ್ ಪಾಸ್, ಬಸ್ ನಿಲ್ದಾಣಗಳು ಹೀಗೆ ಚತುಷ್ಪಥ ಹೆದ್ದಾರಿಯಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ಎಸ್.ನಾಯ್ಕ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ವಿನಂತಿಸಿದ್ದಾರೆ.
ಈಚೆಗೆ ಗೋವಾಕ್ಕೆ ಆಗಮಿಸಿದ್ದ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಶಾಸಕರು ಕ್ಷೇತ್ರದಲ್ಲಿನ ಹೆದ್ದಾರಿ ಸಮಸ್ಯೆಗಳ ಬಗ್ಗೆ ವಿವರಿಸಿ, ಮನವಿ ನೀಡಿದರು.
ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಗೋವಾ ಗಡಿ ಮಾಜಾಳಿಯಿಂದ ಮಾದನಗೇರಿ ತನಕ ಚತುಷ್ಪಥ ಹೆದ್ದಾರಿ ಹಾದುಹೋಗುತ್ತಿದ್ದು, ಸ್ಥಳೀಯ ಜನತೆ, ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ಅನುಕೂಲಕರ ಸೌಲಭ್ಯ ಕಲ್ಪಿಸಿ, ಸರಾಗ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಶಾಸಕರು, ಸಚಿವರ ಗಮನ ಸೆಳೆದಿದ್ದಾರೆ.