Categories: ಉಡುಪಿ

ಎಸ್ ಸಿಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ನಂಬರ್ ಒನ್; ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

ಉಪ್ಪುಂದ : “ಎಸ್ ಸಿಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ನಂಬರ್ ಒನ್ ಆಗಿದ್ದು ಅದರ ಕಾರ್ಯವೈಖರಿ ಇತರ ಬ್ಯಾಂಕ್ ಗಳಿಗೆ ಮಾದರಿಯಾಗಿದೆ.” ಎಂದು ರಾಜ್ಯ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅಭಿಪ್ರಾಯಪಟ್ಟರು. ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ 110ನೇ ಉಪ್ಪುಂದ ಶಾಖೆಯ ಉದ್ಘಾಟನಾ ಸಮಾರಂಭ ಮತ್ತು ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

“ಕೋವಿಡ್ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದ ಸದಸ್ಯರು ಮರಣ ಹೊಂದಿದ್ದಾರೆ. ಈ ಬಗ್ಗೆ ಅಪೆಕ್ಸ್ ಬ್ಯಾಂಕ್ ನಲ್ಲಿ ಸಭೆ ನಡೆಸಿ ಮೃತರ ಕುಟುಂಬಗಳಿಗೆ ನೆರವಾಗುವ ನಿರ್ಧಾರಕ್ಕೆ ಬರಲಾಯಿತು. ಈ ವೇಳೆ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಅವರು ತಲಾ 1 ಲಕ್ಷ ರೂ. ನೆರವು ಘೋಷಣೆ ಮಾಡಿದ್ದು ಅದರಂತೆ ಇಂದು ಮೃತರ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಲಾಗಿದೆ. ಎಲ್ಲ ಸಹಕಾರ ಸಂಘಗಳನ್ನು ಒಂದೇ ತಂತ್ರಾಂಶದಡಿಯಲ್ಲಿ ತರಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು ಅವರು ಒಂದು ವರ್ಷದೊಳಗೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿ 15 ಹಾಲಿನ ಯೂನಿಯನ್ ಇದ್ದು 26 ಲಕ್ಷ ರೈತರು ಹಾಲು ಪೂರೈಕೆ ಮಾಡುತ್ತಿದ್ದಾರೆ. ಅದರಲ್ಲಿ 9 ಲಕ್ಷ ಮಹಿಳೆಯರು ಸದಸ್ಯರಾಗಿರುವುದು ಖುಷಿಯ ವಿಚಾರ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಎಲ್ಲರಿಗೂ ಕಾರ್ಡ್ ವಿತರಿಸಲು ಸರಕಾರ ಮುಂದಾಗಿದೆ.” ಎಂದರು.

“ಮಣ್ಣಿನ ಮಕ್ಕಳು ಸಾಮಾನ್ಯವಾಗಿ ಕೃಷಿ ಖಾತೆ ಕೇಳಲ್ಲ, ಪಿಡಬ್ಲ್ಯು ಖಾತೆಯೋ ಇನ್ನಿತರ ಖಾತೆಯನ್ನೋ ಕೇಳ್ತಾರೆ. ಆದರೆ ಓರ್ವ ಕೃಷಿಕನಾಗಿದ್ದು ಬಿ.ಸಿ. ಪಾಟೀಲ್ ಅವರು ಕೃಷಿ ಖಾತೆಯನ್ನು ಕೇಳಿ ಪಡೆದು ರಾಜ್ಯದಲ್ಲಿ ಕೃಷಿ ಉಳಿವಿಗಾಗಿ ಅಹರ್ನಿಶಿ ದುಡಿಯುತ್ತಿದ್ದಾರೆ. ಅವರ ಶ್ರಮದಿಂದ ರಾಜ್ಯದ ಕೃಷಿ ಇಲಾಖೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ” ಎಂದರು.

ಬಳಿಕ ಮಾತಾಡಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು, “ಉತ್ತರ ಕರ್ನಾಟಕ ಭಾಗದ ಹಲವಾರು ಕಾರ್ಖಾನೆಗಳಿಗೆ ಎಸ್ ಸಿಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ನೀಡುತ್ತಾ ಬಂದಿದೆ. ನನ್ನ ನಿರಾಣಿ ಗ್ರೂಪ್ ಗೆ 25 ವರ್ಷಗಳ ಹಿಂದೆ 12 ಕೋಟಿ ರೂ. ಸಾಲವನ್ನು ರಾಜೇಂದ್ರ ಕುಮಾರ್ ಅವರು ನೀಡಿದ್ದು ಅದರಿಂದ ನನ್ನ ಉದ್ದಿಮೆ ಇಂದು ಯಶಸ್ವಿಯಾಗಿ ಬೆಳೆದು ನಿಂತ ಪರಿಣಾಮ 75,000 ಮಂದಿ ದುಡಿಯಲು ಅವಕಾಶ ಸಿಕ್ಕಿದೆ. ನನ್ನ ಸಂಸ್ಥೆ ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆಯಲು ರಾಜೇಂದ್ರ ಕುಮಾರ್ ಅವರ ಪ್ರೋತ್ಸಾಹವೇ ಕಾರಣ” ಎಂದರು.

ಇದೇ ವೇಳೆ ಬಿಜೂರಿನ ನೂತನ ಸ್ವಸಹಾಯ ಗುಂಪಿನ ಉದ್ಘಾಟನೆಯನ್ನು ಕೃಷಿ ಸಚಿವ ಬಿ. ಸಿ. ಪಾಟೀಲ್ ನೆರವೇರಿಸಿದರು. ಬಳಿಕ ಮಾತಾಡಿದ ಅವರು, “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣುಮಕ್ಕಳು ಸ್ವಾವಲಂಬಿಯಾದರೆ ಆಕೆಯ ಇಡೀ ಕುಟುಂಬದ ಅಭಿವೃದ್ಧಿಯಾಗುತ್ತದೆ.  ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸಾಲ ನೀಡಿ ಅವರನ್ನು ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯ. ಸರಕಾರಗಳು ಮಾಡಬೇಕಿರುವ ಕೆಲಸವನ್ನು ಇಂದು ರಾಜೇಂದ್ರ ಕುಮಾರ್ ಮಾಡುತ್ತಾ ಬಂದಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಅವರ ಸಾಮಾಜಿಕ ಕಳಕಳಿ ಇದೇ ರೀತಿ ಮುಂದುವರಿದು ನಾಡಿನೆಲ್ಲೆಡೆಯ ಜನರು ಪ್ರಯೋಜನ ಪಡೆಯುವಂತಾಗಲಿ” ಎಂದರು.

ಸಮಾವೇಶವನ್ನು ಉದ್ದೇಶಿಸಿ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, “ಉಪ್ಪುಂದ ಶಾಖೆಯು ಉದ್ಘಾಟನೆಗೊಂಡ ದಿನವೇ 4000 ಖಾತೆಗಳು ತೆರೆಯಲ್ಪಟ್ಟಿವೆ. ಇದಕ್ಕಾಗಿ ನಾನು ಇಲ್ಲಿನ ಗ್ರಾಹಕರಿಗೆ ಅಭಾರಿಯಾಗಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕ ಸಂಕಷ್ಟದಿಂದ ಸಕಾಲದಲ್ಲಿ ಸಾಲ ಸಿಗದ ಕಾರಣಕ್ಕೆ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದೇ ರೀತಿ ಶೇ.100ರಷ್ಟು ಸಾಲ ಮರುಪಾವತಿಯಾಗುತ್ತಿದೆ. ಇದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ. ಬ್ಯಾಂಕ್ ಇಷ್ಟು ದೊಡ್ಡಮಟ್ಟದಲ್ಲಿ ಬೆಳೆಯಲು ಕಾರಣ ನಾನೊಬ್ಬನೇ ಅಲ್ಲ, ನೀವು. ಯಾಕೆಂದರೆ ನೀವು ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ ಕಾರಣ ಇದು ಸಾಧ್ಯವಾಯಿತು. ಬರೀ ಭಾಷಣದಲ್ಲಿ ಮಾತೆಯರೇ ತಾಯಂದಿರೇ ಎಂದರೆ ಸಾಲದು. ನಾನು ನಿಮ್ಮನ್ನು ಸ್ವವಲಂಬಿಯನ್ನಾಗಿ ಮಾಡಲು ನಿಮ್ಮನ್ನು ನಂಬಿ ಸಾಲ ನೀಡುತ್ತಿದ್ದೇನೆ. ಇದಕ್ಕಾಗಿ ಮನೆ ಅಡಮಾನ ಇಡಬೇಕಿಲ್ಲ. ನಿಮ್ಮದೇ ಗುಂಪು ರಚಿಸಿದ್ದೀರಿ, ನಿಮ್ಮೆಲ್ಲರ ಮೇಲೆ ವಿಶ್ವಾಸವಿರಿಸಿ ಸಾಲ ನೀಡಿದ್ದೇನೆ. ನೀವು ಮರುಪಾವತಿ ಮಾಡಿದ್ದೀರಿ. ನೀವು ನನಗೇನೂ ಕೊಡುವುದು ಬೇಡ, ಸಾಲ ಪಡೆದು ಅನ್ಯ ಖರ್ಚು ಮಾಡದೇ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ಮುಂದೆ ಅವರ ಕಾಲ ಮೇಲೆ ನಿಲ್ಲಿಸಿ. ಅವರು ನಿಮ್ಮ ಇಡೀ ಕುಟುಂಬಕ್ಕೆ ಬೆಳಕಾಗುತ್ತಾರೆ. ಇದು ನನ್ನೊಬ್ಬನ ಸಾಧನೆಯಲ್ಲ ನಮ್ಮೆಲ್ಲರ ಟೀಮ್ ವರ್ಕ್ ನಿಂದ ಇದು ಸಾಧ್ಯವಾಗಿದೆ.” ಎಂದರು.

ಇದೇ ವೇಳೆ ಕೋವಿಡ್ ನಿಂದ ಮೃತಪಟ್ಟ ನವೋದಯ ಸ್ವಸಹಾಯ ಸಂಘದ ಸದಸ್ಯರ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ವಿತರಿಸಲಾಯಿತು. ಮೃತ ಸದಸ್ಯರ ಚೈತನ್ಯ ವಿಮಾ ಚೆಕ್ ಅನ್ನು ಕುಟುಂಬ ಸದಸ್ಯರಿಗೆ ವಿತರಿಸಲಾಯಿತು. ಉಪ್ಪುಂದ ನೂತನ ಶಾಖೆಯಿಂದ ವಾಹನದ ಸಾಲ ಪತ್ರ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ರಾಜ್ಯ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕೃಷಿ ಸಚಿವ ಬಿ.ಸಿ. ಪಾಟೀಲ್, ಮೀನುಗಾರಿಕೆ ಮತ್ತು ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಶಾಸಕ ಜಿ. ಟಿ. ದೇವೇಗೌಡ, ಸಂಸದ ಬಿ. ವೈ. ರಾಘವೇಂದ್ರ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಲಕ್ಷ್ಮಿ ಖಾರ್ವಿ, ಹಿರಿಯಣ್ಣ ಶೆಟ್ಟಿ, ಎಸ್ ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಬಿ., ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮಹೇಶ್ ಮೊಳಹಳ್ಳಿ ಧನ್ಯವಾದ ಅರ್ಪಿಸಿದರು.

Gayathri SG

Recent Posts

108 ಸೇವೆಯ ಸಿಬ್ಬಂದಿಗಳ ಬಾಕಿ ಇರುವ 3 ತಿಂಗಳ ವೇತನ ತಕ್ಷಣ ಪಾವತಿ ಮಾಡಿ: ಯಶ್ ಪಾಲ್ ಸುವರ್ಣ

ಕಳೆದ 3 ತಿಂಗಳಿನಿಂದ ಸರ್ಕಾರ 108 ಸೇವೆಯ ಸಿಬ್ಬಂದಿಗಳಿಗೆ ವೇತನ ನೀಡದೇ ಚೆಲ್ಲಾಟವಾಡುತ್ತಿದ್ದು, ಇದೀಗ ಇಂದು ರಾತ್ರಿಯಿಂದ ಸಿಬ್ಬಂದಿಗಳು ಬಂದ್…

6 mins ago

ದಿನೇದಿನೇ ಹೆಚ್ಚುತ್ತಿರುವ ಬಿಸಿಲು, ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯನಿರತ ಅಧಿಕಾರಿ ಸಾವು

ಚುನಾವಣಾ ಕರ್ತವ್ಯ ನಿರತ ಸಹಾಯಕ ಕೃಷಿ ಅಧಿಕಾರಿ ಆನಂದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚಿಟಗುಪ್ಪ ತಾಲೂಕಿನ ಕೋಡಂಬಲ್ ಚೆಕ್‌ಪೋಸ್ಟ್‌ನಲ್ಲಿ…

8 mins ago

ಕಾಂಗ್ರೆಸ್‌ ದೇಶ ವಿರೋಧಿ ಪಕ್ಷಗಳೊಂದಿಗೆ ಕೈ ಜೋಡಿಸಿದೆ: ಜೆ.ಪಿ.ನಡ್ಡಾ

ಕಾಂಗ್ರೆಸ್‌ ಪಕ್ಷ  ರಾಮ ವಿರೋಧಿ, ಸನಾತನ ಧರ್ಮ ವಿರೋಧಿಯಾಗಿದೆ.  ದೇಶ ವಿರೋಧಿ ಪಕ್ಷಗಳೊಂದಿಗೆ ಕೈ ಜೋಡಿಸಿದೆ ಎಂದು ಬಿಜೆಪಿ ರಾಷ್ಟ್ರೀಯ…

27 mins ago

ಹೃದಯಾಘಾತದಿಂದ ಚುನಾವಣಾ ಸಿಬ್ಬಂದಿ ಸಾವು

ಮುಧೋಳದಲ್ಲಿ ಚುನಾವಣಾ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ  ನಡೆದಿದೆ.

37 mins ago

ಇ.ಡಿ ಬಂಧನ : ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಿದ ಹೇಮಂತ್ ಸೊರೆನ್

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಬಂಧನದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಜಾರ್ಖಂಡ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಜಾರ್ಖಂಡ್…

46 mins ago

ಕಿಡ್ನಾಪ್​ ಕೇಸ್ ನಲ್ಲಿ ಭವಾನಿ ರೇವಣ್ಣ ಹೆಸರು ಉಲ್ಲೇಖಿಸಿದ ಸಂತ್ರಸ್ತೆಯರು

ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿದಂತೆ ಸಂತ್ರಸ್ತೆಯರು ಎಸ್​​ಐಟಿ ಬಳಿ  ಭವಾನಿ ರೇವಣ್ಣರ ಹೆಸರನ್ನು ಉಲ್ಲೇಖ ಮಾಡಿದ್ದಾರೆ ಎನ್ನುವ…

1 hour ago