News Karnataka Kannada
Saturday, May 11 2024
ಕರಾವಳಿ

ಕೇಸರಿ ಪಾಳಯದಲ್ಲಿ ಮುಗಿದಿಲ್ಲ ಟಿಕೆಟ್‌ ಲೆಕ್ಕಾಚಾರ: ಉಡುಪಿಗೆ ಯಾರೆಂದು ಬಲ್ಲಿರಾ?

Kapu Gurme, Yashpal for Udupi, Asha Thimmappa from Puttur, Bhagirathi for Sullia
Photo Credit : News Kannada

ಉಡುಪಿ : ವಿಧಾನಸಭೆ ಚುನಾವಣೆಗಾಗಿ ಕರಾವಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಬಿಜೆಪಿ ಅಭ್ಯರ್ಥಿಗಳ ಟಿಕೇಟ್‌ ತಳಮಳ ಮುಂದುವರಿದಿದೆ. ಹಿಂದು ಶಕ್ತಿಯನ್ನು ಮತಗಳನ್ನಾಗಿ ಪರಿವರ್ತಿಸುವ ಕಾಯಕವನ್ನು ಬಿಜೆಪಿ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಆದರೆ ಇದೀಗ ಬಿಜೆಪಿ ಹಿಡಿತದಲ್ಲಿರುವ ಕೆಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಲೋಪ ವಿಚಾರ ಮುನ್ನಲೆಗೆ ಬಂದಿದ್ದು, ಕೆಲ ಶಾಸಕರು ಈ ವಿಚಾರದಲ್ಲಿ ಹಿಂದುಳಿದಿದ್ದು, ಅದನ್ನು ಮರೆಮಾಚುವ ಸಲುವಾಗಿ ಹಿಂದುತ್ವ, ಕೋಮು ವಿಷಯಗಳನ್ನು ಮುನ್ನಲೆಗೆ ತರುತ್ತಿದ್ದಾರೆ ಎಂಬ ಆರೋಪ ಚರ್ಚೆಯಲ್ಲಿದೆ. ಇದಕ್ಕೆ ತಕ್ಕಂತೆ ಬಿಜೆಪಿ ಆಂತರಿಕ ಸರ್ವೇಯಲ್ಲಿಯೂ ಕೆಲ ಶಾಸಕರ ಪ್ರೊಗ್ರೇಸ್‌ ರಿಪೋರ್ಟ್‌ ಅಪ್‌ಟು ದ ಮಾರ್ಕ್‌ ಇಲ್ಲ ಎಂಬ ಅಂಶ ಪಕ್ಷದ ಹಿರಿಯರಿಗೆ ಮನವರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಕೆಲ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ನಿಶ್ಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಆದರೆ ಪ್ರಸ್ತುತ ಶಾಸಕರೇ ಮುಂದಿನ ಅಭ್ಯರ್ಥಿಯಾಗುವುದು ಬೇಡ ಎಂಬ ಕೂಗು ಬಲವಾಗಿದೆ. ಈ ನಿಟ್ಟಿನಲ್ಲಿ ಉಡುಪಿಯ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳ ಕುರಿತ ಪ್ಲಸ್‌, ಮೈನಸ್‌ ಅಂಶಗಳು ಇಲ್ಲಿವೆ.

ಬೈಂದೂರು ಸುಕುಮಾರ ಶೆಟ್ಟರಿಗೆ ಒಲಿಯುವುದೇ ಅಭ್ಯರ್ಥಿ ಪಟ್ಟ: ಬೈಂದೂರಿನಲ್ಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಬಿಜೆಪಿ, ಸಂಘಪರಿವಾರದಿಂದಲೇ ತಡೆಯಿದೆ ಎನ್ನಲಾಗಿದೆ. ಕೆಲ ಸಮಯದ ಹಿಂದೆ ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರ ವಿರೋಧವನ್ನುಕಟ್ಟಿಕೊಂಡಿದ್ದರು. ಪ್ರಸ್ತುತ ಈ ತ್ರಾಸ ಪರಿಹಾರವಾದಂತಿದೆ. ಶಾಸಕರು ತಾವು ತಮ್ಮನ್ನು ಅಭಿವೃದ್ಧಿ ಹರಿಕಾರ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡರೂ ಮಲೆನಾಡಿನ ಸೆರಗಲ್ಲಿರುವ ಬೈಂದೂರಲ್ಲಿ ಕುಡಿಯುವ ನೀರು, ರಸ್ತೆ, ನೆಟ್‌ವರ್ಕ್‌ ಸಮಸ್ಯೆ, ಕಾಡುಪ್ರಾಣಿ ಹಾವಳಿ ಹೆಚ್ಚಿದ್ದು ಸುಳ್ಯ, ಪುತ್ತೂರಿನಂತೆಯೇ ಇಲ್ಲಿಯೂ ಕೂಡ ಚುನಾವಣೆ ಬಹಿಷ್ಕಾರದ ಬಿಸಿ ಜೋರಾಗಿದೆ. ಇನ್ನು ಶಾಸಕರ ಓಟಕ್ಕೆ ಸಂಘ ಪರಿವಾರದ ಮುಂಚೂಣಿ ಮುಖಂಡ ಗುರುರಾಜ್‌ ಗಂಟಿಹೊಳೆ, ಸಮಾಜಸೇವಕ ಡಾ.ಗೋವಿಂದ ಬಾಬು ಪೂಜಾರಿ, ಜಿಪಂ ಮಾಜಿ ಸದಸ್ಯ ಬಾಬುಹೆಗ್ಡೆ, ಮಾಜಿ ಜಿಪಂ ಸದಸ್ಯ ಪ್ರಣಯ್‌ ಕುಮಾರ್‌ ಶೆಟ್ಟಿ, ಯುವ ಮುಖಂಡ ನಿತಿನ್‌ ನಾರಾಯಣ ಅವರ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಸುಕುಮಾರ ಶೆಟ್ಟರಿಗೆ ಸೀಟು ಖಚಿತ ಎಂಬ ಮಾತು ಹೆಚ್ಚು ಚಾಲ್ತಿಯಲ್ಲಿದೆ.

ಕುಂದಾಪುರ ವಾಜಪೇಯಿ ಶಿಷ್ಯನಿಗೆ ಸೀಟು ಬಿಟ್ಟುಕೊಡುವರೇ: ಕುಂದಾಪುರ ಕ್ಷೇತ್ರದಲ್ಲಿ ಪ್ರಸ್ತುತ ಶಾಸಕ ಹಾಲಾಡಿ ಅವರದ್ದೇ ಹವಾ ಹೆಚ್ಚು. ಅಧಿಕಾರ ದೊರೆಯಲಿ ದೊರೆಯದಿರಲಿ ಜನರೊಂದಿಗೆ ಬೆರೆಯುವ ಜನಸಾಮಾನ್ಯರ ಶಾಸಕ ಎಂಬ ಹಣೆಪಟ್ಟಿ ಅವರದ್ದು, ಬಿಜೆಪಿಯಲ್ಲಿ ಅವಮಾನವಾದಾಗ ಪಕ್ಷೇತರನಾಗಿ ಗೆದ್ದು ಜನಸಾಮಾನ್ಯರ ಶಕ್ತಿ ಏನು ಎಂಬುದನ್ನು ನಿರೂಪಿಸಿದ ಅವರು ಈ ಬಾರಿಯೂ ಕುಂದಾಪುರ ಅಭ್ಯರ್ಥಿ ಎಂಬುದು ನಿಸ್ಸೇಂದೇಹ. ಆದರೆ ಅವರ ಗರಡಿಯಲ್ಲಿರುವ ಕಿಶೋರ್‌ ಕುಮಾರ್‌ ಕೊಡ್ಗಿ ಅಂತಹವರಿಗೆ ಶಾಸಕರೇ ಖುದ್ದು ಟಿಕೇಟ್‌ ಕೊಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಏನೇ ಆದರೂ ಕುಂದಾಪುರ ಬಿಜೆಪಿ ಅಭ್ಯರ್ಥಿ ನಿರ್ಣಯದಲ್ಲಿ ಶಾಸಕರೇ ಕಿಂಗ್‌ ಎಂಬುದರಲ್ಲಿ ಎರಡು ಮಾತಿಲ್ಲ.

ಸೀಟ್‌ ದೊರೆಯದಿದ್ದಲ್ಲಿ ಪಕ್ಷೇತರ ಸ್ಥಾನದಿಂದ ಸ್ಪರ್ಧೆ: ಉಡುಪಿಯಲ್ಲಿ ಯಾರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಬಹುಚರ್ಚಿತ ವಿಷಯ. ಹಾಲಿ ಶಾಸಕ ಆರ್‌ಎಸ್‌ಎಸ್‌ ಮುಖಂಡರನ್ನು ಸೈಡ್‌ಲೈನ್‌ ಮಾಡಿದ್ದಾರೆ ಎಂಬ ಆರೋಪವಿದೆ. ಶಾಸಕರು ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದು ಮತ್ತೊಂದು ದೂರು. ಗತಿಸಿಹೋದ ಸಿಡಿ ಪ್ರಕರಣ ರಘುಪತಿ ಭಟ್ಟರಿಗೆ ಕಳಂಕ ತಂದಿದೆ. ಈ ಹಿನ್ನಲೆಯಲ್ಲಿ ಶಾಸಕರಿಗೆ ಸೀಟು ದೊರೆಯುವುದು ಕಷ್ಟ ಎಂಬ ಮಾತಿದೆ. ತನಗೆ ದೊರೆಯದಿದ್ದಲ್ಲಿ ಶಿಷ್ಯ ಮಹೇಶ್‌ ಠಾಕೂರ್‌ ಅವರನ್ನು ಮುನ್ನಲೆಗೆ ತರುವ ಯೋಚನೆಯೂ ಅವರಲ್ಲಿದೆ. ಸೀಟ್‌ ದೊರೆಯದಿದ್ದಲ್ಲಿ ಪ್ಲ್ಯಾನ್‌ ಬಿಯನ್ನು ಹಾಲಿ ಶಾಸಕರು ಸಿದ್ಧಪಡಿಸಿದ್ದು, ಪಕ್ಷೇತರನಾಗಿ ಸ್ಪರ್ಧಿಸುವ ವಿಚಾರವನ್ನು ಹೇಳಿಕೊಂಡಿದ್ದಾರೆ. ಉಳಿದಂತೆ ಪ್ರಮೋದ್‌ ಮಧ್ವರಾಜ್‌, ಮಾಜಿ ನಗರಸಭೆ ಅಧ್ಯಕ್ಷ ದಿನಕರ ಶೆಟ್ಟಿ, ಆರ್‌ಎಸ್‌ಎಸ್‌ ಕಟ್ಟಾಳು ವಿಜಯಕುಮಾರ್‌ ಶೆಟ್ಟಿ, ಯಶ್‌ಪಾಲ್‌ ರೇಸ್‌ನಲ್ಲಿದ್ದಾರೆ.

ಕಾಪುವಿನಲ್ಲಿ ಗುರ್ಮೆ ರೇಸ್‌ನಲ್ಲಿ: ಕಾಪು ಕ್ಷೇತ್ರದಲ್ಲಿ ಹಾಲಿ ಶಾಸಕ ಲಾಲಾಜಿ ಅವರಿಗೆ ಟಿಕೇಟ್‌ ಕಷ್ಟ ಎಂಬ ಮಾತು ಕೇಳಿಬರುತ್ತಿದೆ. ಆಂತರಿಕ ಸಮೀಕ್ಷೆಯಲ್ಲಿಯೂ ನಕಾರಾತ್ಮಕ ಅಂಶಗಳು ಇದ್ದು, ಸುರೇಶ್‌ ಶೆಟ್ಟಿ ಗುರ್ಮೆ ಟಿಕೇಟ್‌ ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಯಶ್‌ಪಾಲ್‌ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ, ಮಹಿಳಾ ಕೋಟಾದಲ್ಲಿ ನಯನಾ ಗಣೇಶ್‌, ಗೀತಾಂಜಲಿ ಸುವರ್ಣ , ಶ್ರೀಶ ನಾಯಕ್‌ ಪೆರ್ಣಂಕಿಲ, ಪ್ರಮೋದ್‌ ಮಧ್ವರಾಜ್‌ ಆಕಾಂಕ್ಷಿಗಳು. ಮೀನುಗಾರ ಸಮುದಾಯ ಸೇರಿದಂತೆ ಜಾತಿ ರಾಜಕೀಯವೂ ಈ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆ ಇದೆ.

ಪ್ರಮೋದ್‌ ಮಧ್ವರಾಜ್‌ ಹೈ ಓಡಾಟ, ಹಲವು ಕ್ಷೇತ್ರಗಳ ಮೇಲೆ ಕಣ್ಣು: ಕಾಂಗ್ರೆಸ್‌ನಿಂದ ಬಿಜೆಪಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಪಕ್ಷ ಸೇರ್ಪಡೆ ವೇಳೆ ನನಗೆ ಯಾವುದೇ ಆಕಾಂಕ್ಷೆ ಇಲ್ಲ ಎಂದು ತಿಳಿಸಿದ್ದರು. ಪ್ರಸ್ತುತ ಬದಲಾದ ಸನ್ನಿವೇಶದಲ್ಲಿ ಮಧ್ವರಾಜ್‌, ಬೈಂದೂರು, ಕಾಪು, ಉಡುಪಿ ಸೇರಿದಂತೆ ಕೆಲ ಅನಿಶ್ಚಿತ ಕ್ಷೇತ್ರಗಳ ಮೇಲೆ ಕಣ್ಣಿರಿಸಿದ್ದು, ಉಡುಪಿಯಲ್ಲಿ ಭಟ್‌ ವರ್ಸ್‌ಸ್‌ ಮಧ್ವರಾಜ್‌ ಎಂಬಂತೆ ಆಗಿದೆ. ಅಲ್ಲದೆ ಹಿರಿಯ ಆರ್‌ಎಸ್‌ಎಸ್‌ ಮುಖಂಡರು, ಯೋಗಿ ಆದಿತ್ಯನಾಥ್‌, ಜೆಪಿ ನಡ್ಡಾ ಸೇರಿದಂತೆ ಪಕ್ಷದ ಉನ್ನತ ನಾಯಕರ ನಿಕಟ ಸಂಪರ್ಕ ಹೊಂದಿರುವುದು ಟಿಕೇಟ್‌ ಪಡೆಯಲು ಹೋರಾಟದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ. ಅಲ್ಲದೆ ಹಣಬಲವೂ ಜೊತೆಯಲ್ಲಿರುವುದು ಅವರನ್ನು ಮತ್ತಷ್ಟು ಸ್ಟ್ರಾಂಗ್‌ ಆಗಿಸಿದೆ.

ಸುನೀಲ್‌ಗೆ ಸರಿಸಾಟಿ ಯಾರು: ಕಾರ್ಕಳದಲ್ಲಿ ಸಚಿವ ಸುನೀಲ್‌ ಕುಮಾರ್‌ಗೆ ಟಿಕೇಟ್‌ ನಿಶ್ಚಿತ ಎಂಬ ಮಾತಿದೆ. ಅವರನ್ನು ಎದುರು ಹಾಕಿಕೊಳ್ಳುವ ಕ್ಯಾಂಡಿಡೇಟ್‌ ಸಧ್ಯ ಬಿಜೆಪಿಯಲ್ಲಿ ಇಲ್ಲದಿರುವುದು ಕ್ಷೇತ್ರದಲ್ಲಿ ಅವರ ಓಟಕ್ಕೆ ವೇಗ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು